ಮಡಿಕೇರಿ, ಮೇ ೩೦: ಕೊಡಗು ಕಣಿಯ ಜನಾಂಗದ ವತಿಯಿಂದ ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ೫ನೇ ವರ್ಷದ ಕಣಿಯ ಕಪ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಅರಪಟ್ಟು - ಅರಮೇರಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹರಿಹರ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಅAತಿಮ ಪಂದ್ಯಾಟದಲ್ಲಿ ಟಾಸ್‌ಗೆದ್ದು ಅರಪಟ್ಟು - ಅರಮೇರಿ ತಂಡ ನಿಗದಿತ ೪ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೫೬ ರನ್ ಬಾರಿಸಿತು. ಅರಮೇರಿ ತಂಡದ ಪರ ದೀಕ್ಷಿತ್ ೪೬ ರನ್ ಬಾರಿಸಿದರು. ಹರಿಹರ ತಂಡ ನಿಗದಿತ ೪ ಓವರ್‌ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೨೧ ರನ್ ಗಳಿಸಿ ಸೋಲಿಗೆ ಶರಣಾಯಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ದೀಕ್ಷಿತ್ ಪಡೆದುಕೊಂಡರು. ಪಂದ್ಯಾಟದಲ್ಲಿ ಒಟ್ಟು ೬ ತಂಡಗಳು ಭಾಗವಹಿಸಿದ್ದವು.
ಕಣಿಯ ಜನಾಂಗ ಬಾಂಧವರ ಮಕ್ಕಳಿಗೆ ವಿವಿಧ ಕ್ರೀಡಾಸ್ಪರ್ಧೆಯನ್ನು ನಡೆಸಲಾಯಿತು. ವಿವಾಹಿತ ಮಹಿಳೆಯರ ವಿಭಾಗದ ವಿಷದ ಚೆಂಡಿನ ಸ್ಪರ್ಧೆಯಲ್ಲಿ ಅರ್ಪಿತಾ (ಪ್ರ), ಪುಷ್ಯಾ ಪ್ರಕಾಶ್ (ದ್ವಿ), ಯುವತಿಯರ ವಿಭಾಗದಲ್ಲಿ ಸಿಂಚನ (ಪ್ರ), ಪೊನ್ನಮ್ಮ (ದ್ವಿ) ಸ್ಥಾನ ಪಡೆದರು.
ಪಂದ್ಯಾವಳಿಯ ಉದ್ಘಾಟನೆಯನ್ನು ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ೧೮ ಭಾಷಿಕ ಜನಾಂಗದವರು ಒಂದಾಗಿ ಬೆರೆತಾಗ ಜನಾಂಗದಲ್ಲಿನ ಒಗ್ಗಟ್ಟು ಸಾಧ್ಯ ಎಂದರು.
ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಮಾತನಾಡಿ, ನಾವು ನಮ್ಮತನವನ್ನು ಎಲ್ಲಿಯೂ ಕಳೆದುಕೊಳ್ಳಬಾರದು. ಜನಾಂಗಕ್ಕೆ ಬಳುವಳಿಯಾಗಿ ಬಂದಿರುವ ಕಲೆ, ಕಸುಬನ್ನು ಸ್ವಾಭಿಮಾನದಿಂದ ನಿರ್ವಹಿಸುವಂತಾಗಬೇಕು ಎಂದರು.
ಕೂಟದ ಸಹಕಾರ್ಯದರ್ಶಿ ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕಣಿಯ ಸಮಾಜದ ಮಾಜಿ ಅಧ್ಯಕ್ಷ ಕಣಿಯರ ನಾಣಯ್ಯ, ಕುಡುವಚ್ಚೇರಿರ ಜಯ, ಹಿರಿಯರಾದ ಕಣಿಯರ ಶಾರದ, ಜಯಕುಮಾರ್, ಭರತ್ ಸುಬ್ಬಯ್ಯ ಭಾಗವಹಿಸಿ, ವಿಜೇತರಿಗೆ ಟ್ರೋಫಿ ಹಾಗೂ ನಗದನ್ನು ವಿತರಿಸಿದರು. ಅಧ್ಯಕ್ಷತೆಯನ್ನು ಕಣಿಯ ಸಮಾಜದ ಅಧ್ಯಕ್ಷ ಚೇಂದುವAಡ ದೇವಯ್ಯ ವಹಿಸಿದ್ದರು.
ಕುಡುವಚ್ಚೇರಿರ ಉಮೇಶ್ ಪ್ರಾರ್ಥಿಸಿ, ಬಾಚಿರ ರಾಜ ನಿರೂಪಿಸಿದರು. ಕ್ರೀಡಾಕೂಟದ ಆಯೋಜಕರಾದ ಕಣಿಯರ ಜೆ. ಪ್ರಕಾಶ್ ಸ್ವಾಗತಿಸಿ, ವಂದಿಸಿದರು.