ಸಿದ್ದಾಪುರ, ಮೇ ೩೦ : ನೆಲ್ಲಿಹುದಿಕೇರಿ ವ್ಯಾಪ್ತಿಯ ಎಂ ಜಿ ಕಾಲೋನಿಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ೩ ಗಂಟೆಯ ಸಮಯದಲ್ಲಿ ಆಗಂತುಕರು ಕೆಲವೊಂದು ಮನೆಗೆ ನುಗ್ಗುವ ಯತ್ನಕ್ಕೆ ಮುಂದಾಗಿದ್ದು ಈ ಸಂದರ್ಭದಲ್ಲಿ ಮನೆಯವರು ಎಚ್ಚೆತ್ತು ಬೊಬ್ಬೆ ಹಾಕಿದ್ದರಿಂದ ಆಗಂತುಕರು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ. ಈ ವ್ಯಾಪ್ತಿಯ ಎಲ್ಲಾ ಬೀದಿ ದೀಪಗಳನ್ನು ನಂದಿಸಿ ಈ ಕೃತ್ಯ ಎಸಗಿರುವುದಾಗಿ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಸಿಸಿ ಕ್ಯಾಮರಾ ತಪಾಸಣೆ ನಡೆಸಿ ಆಗಂತುಕರನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ನಿವಾಸಿಗಳು ಆತಂಕಕ್ಕೆ ಒಳಗಾಗದಂತೆ ಕರೆ ನೀಡಿದ್ದು, ರಾತ್ರಿ ಸಮಯದಲ್ಲಿ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಗಳನ್ನು ಕಂಡಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕರೆ ನೀಡಿದರು.

ಕೆಲವು ದಿನಗಳ ಹಿಂದೆ ಹಂಸ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿದ್ದು, ಪ್ರಕರಣ ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದೆ. ಅಲ್ಲದೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ನಡುವೆ ಇದೀಗ ರಾತ್ರಿ ವೇಳೆ ಆಗುಂತಕರ ಓಡಾಟ ನಿವಾಸಿಗಳನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.