ಸಿದ್ದಾಪುರ, ಮೇ ೨೯: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನೆಲ್ಯಹುದಿಕೇರಿ ವ್ಯಾಪ್ತಿಯ ನಿವೇಶನರಹಿತರು ಜಮಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಪಿ.ಆರ್. ಭರತ್ ಮಾತನಾಡಿ, ೨೦೧೯ ರ ಮಹಾಪ್ರಳಯದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬಗಳಿಗೆ ಇಂದಿಗೂ ಶಾಶ್ವತ ಪರಿಹಾರ ಕಲ್ಪಿಸದೇ, ನಿರಾಶ್ರಿತರಿಗಾಗಿ ಅಭ್ಯತ್‌ಮಂಗಲ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಜಾಗದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೆ ಇರುವುದಕ್ಕೆ ಸ್ಥಳೀಯ ಗ್ರಾ.ಪಂ ಹಾಗೂ ಜಿಲ್ಲಾಡಳಿತದ ದಿವ್ಯನಿರ್ಲಕ್ಷö್ಯ ಕಾರಣ ಎಂದು ದೂರಿದರು.
ಕಂದಾಯ ಇಲಾಖೆ ವತಿಯಿಂದ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟೀಸ್ ನೀಡಿದ್ದು, ಸುರಕ್ಷಿತ ಸ್ಥಳ ಯಾವುದೆಂದು ಪ್ರಶ್ನಿಸಿದರು. ಅಲ್ಲದೆ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸುಮಾರು ೪೫೦ ಕ್ಕೂ ಅಧಿಕ ಮಂದಿ ವಸತಿ ರಹಿತರು ಬಾಡಿಗೆ ಮನೆ ಹಾಗೂ ಲೈನ್‌ಮನೆಯಲ್ಲಿ ವಾಸವಿದ್ದು, ಜಿಲ್ಲಾಡಳಿತ ಹಾಗೂ ಸರಕಾರ ಇತ್ತೀಚೆಗೆ ಬೆಟ್ಟದ ಕಾಡು ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಜಾಗದ ಕಾನೂನು ತೊಡಕುಗಳನ್ನು ನಿವಾರಿಸಿ ಆದಷ್ಟು ಬೇಗ ಸ್ಥಳೀಯ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ನೆಲ್ಯಹುದಿಕೇರಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿದರು. ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಬರಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಕಂದಾಯ ಪರಿವೀಕ್ಷಕ ಸಂತೋಷ್ ಗ್ರಾಮ ಲೆಕ್ಕಿಗ ಸಚಿನ್, ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿದರು.
ಮನವಿ ಪತ್ರ ಸ್ವೀಕರಿಸಿದ ಬಳಿಕ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಮಾತನಾಡಿ, ಸಂತ್ರಸ್ತರಿಗಾಗಿ ವಶಪಡಿಸಿಕೊಂಡ ಜಾಗದಲ್ಲಿ ಈಗಾಗಲೇ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಹಂತ ಹಂತವಾಗಿ ಕಾಮಗಾರಿ ನಡೆಯಲಿದೆ. ಅಲ್ಲದೆ ವ್ಯಾಪ್ತಿಯಲ್ಲಿ ಗೋಮಾಳ ಜಾಗ ಹೆಚ್ಚಿರುವುದರಿಂದ ಅಂತಹ ಜಾಗದವರು ಹಕ್ಕು ಪತ್ರಕ್ಕೆ ಅರ್ಹರಾಗಿರುವುದಿಲ್ಲ ಎಂದರು, ಅಲ್ಲದೆ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಜಾಗದ ಕಾನೂನು ತೊಡಕುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದೆಂದರು. ಪಡಿತರ ಸಮಸ್ಯೆಗೆ ಸಂಬAಧಿಸಿದAತೆ ಆಹಾರ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸಂಚಾರಿ ನ್ಯಾಯಬೆಲೆ ಅಂಗಡಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೋಣಪ್ಪ, ಉದಯ, ಚಂದ್ರನ್, ಅಬೀಬ್ , ಶಿವರಾಮ್, ಮುಸ್ತಫಾ ಇನ್ನಿತರರು ಹಾಜರಿದ್ದರು.