ಸೋಮವಾರಪೇಟೆ, ಮೇ ೨೯: ಮುಂದಿನ ಐದು ವರ್ಷಗಳ ಅವಧಿಯೊಳಗೆ ಕೊಡಗಿಗೆ ಸಚಿವ ಸ್ಥಾನ ಲಭಿಸುವ ನಿರೀಕ್ಷೆಯಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಯೂ ಕೊಡಗಿನವರೇ ಆಗುತ್ತಾರೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್‌ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಡಗಿಗೆ ಮಂತ್ರಿ ಸ್ಥಾನ ಸಿಗಬೇಕೆಂದು ನಮಗೆಲ್ಲರಿಗೂ ಆಸೆಯಿದೆ. ಕಳೆದ ೨೫ ವರ್ಷಗಳಿಂದ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಈ ಬಾರಿಯ ಪ್ರಥಮ ಅವಧಿಯಲ್ಲಿ ಲಭಿಸುವ ನಿರೀಕ್ಷೆಯಿತ್ತು. ಆದರೆ ಎರಡೂ ಕ್ಷೇತ್ರದಲ್ಲಿ ಮೊದಲನೇ ಬಾರಿ ಗೆದ್ದಿರುವುದರಿಂದ ಪ್ರಥಮ ಅವಧಿಯಲ್ಲಿ ಮಂತ್ರಿ ಸ್ಥಾನ ಜಿಲ್ಲೆಗೆ ಲಭಿಸಿಲ್ಲ ಎಂದರು.

ಈರ್ವರಲ್ಲಿ ಯಾರಿಗೆ ಮಂತ್ರಿ ಭಾಗ್ಯ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂಥರ್ ಗೌಡ, “ಅವರು (ಎ.ಎಸ್. ಪೊನ್ನಣ್ಣ) ಬೇರೆ ನಾವು ಬೇರೆ ಅಂತ ತಿಳಿದಿಲ್ಲ. ಪೊನ್ನಣ್ಣ ನಮ್ಮ ದೊಡ್ಡಣ್ಣ, ಮಂಥರ್ ಅವರ ತಮ್ಮ ತರಾನೇ. ಒಗ್ಗಟ್ಟಾಗಿದ್ದೇವೆ. ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದೇ ನಮ್ಮ ಪ್ರಥಮ ಸಾಧನೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಶಾಸಕರಾಗಿ ನಿಭಾಯಿಸುತ್ತೇವೆ. ಮುಂದಿನ ೫ ವರ್ಷಗಳ ಅವಧಿಯಲ್ಲಿ ಕೊಡಗಿನವರು ಮಂತ್ರಿ ಆಗುತ್ತಾರೆ. ಉಸ್ತುವಾರಿ ಸಚಿವರೂ ಆಗುತ್ತಾರೆ” ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.