ವೀರಾಜಪೇಟೆ, ಮೇ ೨೯: ವೀರಾಜಪೇಟೆ ಕೊಡವ ಸಮಾಜ ನೂರು ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಸೆ.೨೪ ರಂದು ಸಮಾಜದ ‘ನೂರಾಂಡ್ ನಮ್ಮೆ’ಯನ್ನು ಅದ್ಧೂರಿಯಾಗಿ ಅಚರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾದ ತಯಾರಿಗಳ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ಹೇಳಿದರು.

ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಮನುಕುಮಾರ್ ೧೯೨೧ ರಲ್ಲಿ ಈ ಸಮಾಜ ಸ್ಥಾಪನೆಯಾಗಿದ್ದು, ಕೋವಿಡ್ ಮತ್ತಿತರ ಕಾರಣದಿಂದ ಶತಮಾನೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ. ಇದೀಗ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ್ದು, ಈಗ ನೂರಾಂಡ್ ನಮ್ಮೆ ಎಂಬ ಹೆಸರಿನಲ್ಲಿ ನೂರನೇ ವರ್ಷದ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದೇವೆ. ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ. ಆ ದಿನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸಲು ಆಲೋಚಿಸಿದ್ದು, ವೀರಾಜಪೇಟೆ ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ನಡೆಸುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸಮಾಜಕ್ಕಾಗಿ ದುಡಿದ ಹಿರಿಯ ಚೇತನಗಳನ್ನು ಸಮಾಜವನ್ನು ಮುನ್ನಡೆಸಿದವರನ್ನು, ನೆರವು ನೀಡಿದ ದಾನಿಗಳನ್ನು ಮತ್ತು ಸರಕಾರಕ್ಕೆ ನಾವು ಋಣಿಗಳಾಗಿದ್ದೆವೆ. ಇಂದು ನಮ್ಮ ಸಮಾಜವು ೨,೩೭೦ ಸದಸ್ಯರನ್ನು ಹೊಂದಿದ್ದು, ಮುಂದೆ ಉತ್ತಮ ಸಮಾಜಮುಖಿ ಕೆಲಸಗಳÀನ್ನು ಮಾಡುತ್ತೇವೆ. ಈ ನೂರರ ಸಂಭ್ರಮಾಚರಣೆಗೆ ಕೊಡವ ಜನಾಂಗದವರು ಕೊಡವ ಅಭಿಮಾನಿಗಳು ಕೈಜೋಡಿಸಿ ಸಹಕರಿಸುವಂತೆ ಕೋರಿದ್ದಾರೆ.

ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಕುಯ್ಮಂಡ ಕಿರಣ್, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಮರಣ ನಿಧಿ ಕಾರ್ಯದರ್ಶಿ ಮಾದೇಯಂಡ ಸಂಪಿ ಪೂಣಚ್ಚ, ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ಸುಬ್ರಮಣಿ, ನಿರ್ದೇಶಕರಾದ ಬಾಚೀರ ಜಗದೀಶ್, ತಾತಂಡ ಕಬೀರ್ ಮತ್ತು ಚೇಮಿರ ಅರ್ಜುನ ಉಪಸ್ಥಿತರಿದ್ದರು.