ಸೋಮವಾರಪೇಟೆ, ಮೇ ೨೯: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ ಮಾನಸ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಸದಸ್ಯರಿಗೆ ಗುಂಪು ವಿಮೆ ಮಾಡಿಸುವಂತೆ ಸದಸ್ಯರು ಸಲಹೆ ನೀಡಿದ ಮೇರೆಗೆ, ಮುಂದಿನ ದಿನಗಳಲ್ಲಿ ವಿಮೆ ಮಾಡಿಸುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು. ಸಂಘದ ಆಡಳಿತ ಮಂಡಳಿಯನ್ನು ಮುಂದಿನ ಸಾಲಿನವರೆಗೆ ಮುಂದುವರೆಸಲು ಸಭೆ ತೀರ್ಮಾನಿಸಿತು.
ನಮ್ಮ ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದೆ ಸಾಕಷ್ಟು ವರ್ಷಗಳನ್ನು ಕಳೆಯಲಾಗಿದೆ. ಇದೀಗ ಪಟ್ಟಣ ಪಂಚಾಯಿತಿಯ ಎದುರು ಸಂಘಕ್ಕೆ ೨೬ ಲಕ್ಷ ರೂ.ಗಳ ವೆಚ್ಚದ ನಿವೇಶನದಲ್ಲಿ ೨೩ ಲಕ್ಷ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರು ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಅಧ್ಯಕ್ಷ ಸುರೇಶ್ ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ವಿನ್ಸಿ ಡಿಸೋಜ, ಖಜಾಂಚಿ ಮಣಿ, ಪದಾಧಿಕಾರಿಗಳಾದ ಡ್ಯಾನಿಯಲ್, ಕೃಷ್ಣ, ರಮೇಶ್, ಶೇಷಪ್ಪ ಮತ್ತು ಎ.ಪಿ. ವೀರರಾಜು ಇದ್ದರು.