ನಾಪೋಕ್ಲು, ಮೇ ೨೭: ಕೋವಿ ಆಯುಧ ಮಾತ್ರವಲ್ಲ. ಇದು ಕೊಡವ ಜನಾಂಗದ ಧಾರ್ಮಿಕ ಸಂಸ್ಕಾರ. ಇದನ್ನು ಅನಾದಿಕಾಲದಿಂದಲೂ ಬಳಕೆ ಮಾಡುತ್ತಾ ಬರುತ್ತಿದ್ದು ಕೊಡವರ ಈ ಹಕ್ಕು ಸಂವಿಧಾನಬದ್ಧವಾಗಿ ದೊರಕಬೇಕಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಪ್ರತಿಪಾದಿಸಿದರು.

ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನೆಲಜಿ ಫಾರ್ಮರ್ಸ್ ಡೆವಲಪ್ ಮೆಂಟ್ ಅಂಡ್ ರಿಕ್ರಿಯೆಶನ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಕೊಡವ ಕೌಟುಂಬಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು (ತೆಂಗೆ ಬೊಡಿ ನಮ್ಮೆ) ಕೋವಿಗಳಿಗೆ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಯುದ್ಧ ಮತ್ತು ಬೇಟೆ ಕೊಡವರ ಪರಂಪರೆ. ಈ ಹಕ್ಕನ್ನು ಕಸಿಯುವ ಕೆಲಸ ಆಗುತ್ತಿದೆ. ಕೊಡವರ ಸಂಸ್ಕೃತಿ ವಿಶಿಷ್ಟವಾದುದು. ವೈವಿಧ್ಯಮಯ ಸಂಸ್ಕೃತಿ ಎಲ್ಲಾ ಜನಾಂಗದವರ ಧರ್ಮವನ್ನು ಸಮಾನವಾಗಿ ಕಾಣಬೇಕಿದೆ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರಬಾರದು. ಆದರೆ ಇಂದು ಕೊಡವ ಜನಾಂಗದ ಹಕ್ಕನ್ನು ಕಸಿಯುವ ಕೆಲಸ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೊಡವ ನ್ಯಾಷನಲ್ ಕೌನ್ಸಿಲ್ ಕೊಡವರ ಆಚರಣೆಗಳಾದ ಕೈಲ್ ಮುಹೂರ್ತ ಹುತ್ತರಿ, ಕೋವಿಯ ಬಳಕೆ ಮುಂತಾದ ಸಂಸ್ಕೃತಿಯ ಭಾಗಗಳನ್ನು ಸಾರ್ವತ್ರಿಕವಾಗಿ ಪ್ರದರ್ಶಿಸುವ ಕೆಲಸವನ್ನು ಸಿಎನ್‌ಸಿ ಮಾಡುತ್ತಿದೆ. ಕೋವಿಹಬ್ಬವನ್ನು ಕಳೆದ ೧೩ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಕೊಡವರ ದೇವನೆಲೆ, ಭಾಷೆ ,ಸಂಸ್ಕೃತಿಗೆ ಧಕ್ಕೆ ತರುವಂತಹ ಕೆಲಸ ಆಗಬಾರದು ಎಂದರು.

ಕಾಫಿ ಬೆಳೆಗಾರ,ದಾನಿ ಬೊಳ್ಳಚೆಟ್ಟಿರ ಸುರೇಶ್ ಮಾತನಾಡಿ ಸಂಸ್ಕೃತಿಯನ್ನು ಯುವಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ. ಜನಾಂಗದ ಧಾರ್ಮಿಕ ಸಂಸ್ಕಾರವನ್ನು ಉಳಿಸಿ ಬೆಳೆಸಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ನೆಲಜಿ ಫಾರ್ಮರ್ಸ್ ಡೆವಲಪ್‌ಮೆಂಟ್ ಅಂಡ್ ರಿಕ್ರಿಯೇಷನ್ ಅಧ್ಯಕ್ಷ ಮಂಡೀರ ನಂದ ನಂಜಪ್ಪ ವಹಿಸಿದ್ದು ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಸಿ.ಎಸ್. ಸುರೇಶ್, ಉಪಾಧ್ಯಕ್ಷ ಕೈಬುಲಿರ ಉಮೇಶ್, ಕಾರ್ಯದರ್ಶಿ ಮಾಳೆಯಂಡ ಪ್ರದೀಪ್, ನಿರ್ದೇಶಕರಾದ ಚಿಯಕಪೂವಂಡ ನವೀನ್ ನಾಚಪ್ಪ, ಮಾಳೆಯಂಡ ವಿಜಯ, ಮಾಳೆಯಂಡ ವಿಜು, ಚಿಯಕಪೂವಂಡ ಅಪ್ಪಚ್ಚು, ಅಪ್ಪುಮಣಿಯಂಡ ಕಿಶನ್ ಮೇದಪ್ಪ, ಮಣವಟ್ಟಿರ ಅರುಣ್ ಪಳಂಗಪ್ಪ, ಮಾಳೆಯಂಡ ವಿಜು, ಬೊಡಿ ನಮ್ಮೆ ಸಂಚಾಲಕ ಮಾಳೆಯಂಡ ಅಪ್ಪಣ್ಣ ಇನ್ನಿತರರು ಉಪಸ್ಥಿತರಿದ್ದರು. ಅಲ್ಲರಂಡ ಪ್ರೀತು ಕುಮಾರಿ ಸತೀಶ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮುಕ್ಕಾಟಿರ ವಿನಯ್ ಸ್ವಾಗತಿಸಿ, ವಂದಿಸಿದರು. ನಂತರ ಸ್ಪರ್ಧಾ ಕಾರ್ಯಕ್ರಮಗಳು ಜರುಗಿದವು. ಸ್ಪರ್ಧೆಯಲ್ಲಿ ೧೨೮ ಕುಟುಂಬಗಳು ಭಾಗವಹಿಸಿದ್ದು ನಾಳೆ ಅಂತಿಮ ಸ್ಪರ್ಧೆ ಜರುಗಲಿದೆ.