ಗೋಣಿಕೊಪ್ಪಲು, ಮೇ ೨೬: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿರುವ ಹೈಕೋರ್ಟ್ನ ಹಿರಿಯ ವಕೀಲರಾದ ಎ.ಎಸ್.ಪೊನ್ನಣ್ಣನವರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿ ಗಿರಿಜನ ಮುಖಂಡರು ನಿರ್ಣಯವನ್ನು ಕೈಗೊಂಡಿದ್ದಾರೆ.

ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಿರಸುಳಿ ಹಾಡಿಯಲ್ಲಿ ಸಭೆ ನಡೆಸಿದ ಗಿರಿಜನ ಮುಖಂಡರುಗಳು ಪ್ರಸ್ತುತ ವಿದ್ಯಾಮಾನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಿರಿಜನರು ವಾಸವಿದ್ದು ಬಹಳಷ್ಟು ಮಂದಿ ಅರಣ್ಯದ ಅಂಚಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಇನ್ನು ಕೂಡ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ದೊರೆತಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ಗಿರಿಜನರ ಪರವಾಗಿ ಧ್ವನಿ ಎತ್ತಲಿಲ್ಲ ಎಂದು ಗಿರಿಜನ ಹಿರಿಯ ಮುಖಂಡ ಚುಬ್ರು ಸಭೆಯಲ್ಲಿ ಪ್ರಸ್ತಾಪಿಸಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಆದಿವಾಸಿಗಳು ಶ್ರಮಿಸಿದ್ದಾರೆ ಎಂದರು.

ಗಿರಿಜನ ಮುಖಂಡ ಪಿ.ಕೆ.ಸಿದ್ದಪ್ಪ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಮುಂದಿನ ದಿನಗಳಲ್ಲಿ ಅರ್ಹ ಗಿರಿಜನರಿಗೆ ತಲುಪಿಸಬೇಕು. ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಈ ನಿಟ್ಟಿನಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಎ.ಎಸ್.ಪೊನ್ನಣ್ಣ ಸ್ಪಂದಿಸುವ ಭರವಸೆ ಜನರಲ್ಲಿದೆ ಎಂದರು.

ಪಿ.ಸಿ. ಮಣಿಕುಂಞ ಮಾತನಾಡಿದರು.

ಸಭೆಯ ನಿರ್ಣಯದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಪತ್ರ ಬರೆದು ಶಾಸಕ ಪೊನ್ನಣ್ಣನವರಿಗೆ ಮಂತ್ರಿಸ್ಥಾನ ನೀಡಲು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಗಿರಿಜನ ಮುಖಂಡರುಗಳಾದ ಪಿ.ಸಿ.ಸಿದ್ದು, ಪಿ.ಕೆ.ಚಾಮ, ಪಿ.ಆರ್. ಚರಣ್, ಪಿ.ಕೆ. ಸಿದ್ದರಾಜು, ಪಿ.ಆರ್.ರಘು, ಪಿ.ಕೆ.ರಾಜು, ಪಿ.ಎಂ. ಕಾರಿ, ಪಿ.ಎನ್. ಸುಬ್ಬ, ಜೆ.ವಿ. ಸತೀಶ್, ಮಲ್ಲಪ್ಪ, ತಮ್ಮಯ್ಯ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.