ಸಿದ್ದಾಪುರ, ಮೇ ೨೬: ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ ಗ್ರಾಮಗಳಿಗೆ ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ಜಿಲ್ಲಾಡಳಿತದ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು ಗುಹ್ಯ ಗ್ರಾಮಗಳಿಗೆ ರಾಮಚಂದ್ರ ಹಾಗೂ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಓಮಪ್ಪ ಬಣಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲದೇ ಮಳೆ ಸಂದರ್ಭದಲ್ಲಿ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರು. ಇದಾದ ಬಳಿಕ ಮಾಲ್ದಾರೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ನಿರ್ಮಿಸಲು ಗುರುತಿಸಿದ್ದ ಜಾಗವನ್ನು ಪರಿಶೀಲಿಸಿದರು. ಈಗಾಗಲೇ ಪ್ರವಾಹ ಪೀಡಿತ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಂದಾಯ ಇಲಾಖೆಯ ವತಿಯಿಂದ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಮನೆ ಮನೆಗಳಿಗೆ ತೆರಳಿ ನೋಟೀಸ್ ನೀಡಿರುತ್ತಾರೆ. ಆದರೆ ನದಿ ತೀರದ ನಿವಾಸಿಗಳು ತಮಗೆ ಶಾಶ್ವತ ಸೂರು ನೀಡುವಂತೆ ಒತ್ತಾಯಿಸುತ್ತಿದ್ದಾರೆ.