ಮಡಿಕೇರಿ ಮೇ ೨೬: ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮುಸ್ಲಿಂ ಬ್ಯಾರಿ ಸಮುದಾಯದ ಯು.ಟಿ. ಖಾದರ್ ಅವರನ್ನು ಕೊಡಗು ಜಿಲ್ಲಾ ಬ್ಯಾರಿ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಗುವುದು ಎಂದು ಟ್ರಸ್ಟ್ನ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಯು.ಟಿ. ಖಾದರ್ ಅವರ ಆಯ್ಕೆ ಹರ್ಷದಾಯಕವಾಗಿದೆ ಮತ್ತು ಬ್ಯಾರಿ ಸಮುದಾಯಕ್ಕೆ ಹೆಮ್ಮೆ ಎನಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೂನ್ ತಿಂಗಳ ಕೊನೆಯ ವಾರದಲ್ಲಿ ಸ್ಪೀಕರ್ ಸೇರಿದಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.