ಮಡಿಕೇರಿ, ಮೇ ೨೬: ನಗರದ ಜಿಲ್ಲಾಡಳಿತ ಭವನದ ಎದುರಿನ ಬರೆಗೆ ಅಡ್ಡಲಾಗಿ ರೂ. ೮ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜರ್ಮನ್ ತಂತ್ರಜ್ಞಾನದ ತಡೆಗೋಡೆಯ ಪ್ಯಾನಲ್‌ಗಳನ್ನು ತೆರವುಗೊಳಿಸ ಲಾಗಿದೆ.

ಕಳೆದ ಮಳೆಗಾಲದಲ್ಲಿ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ತಡೆಗೋಡೆಯೊಳಗೆ ನೀರು ಹೋಗಿ ಅಲ್ಲಲ್ಲಿ ಬಿರುಕು, ಉಬ್ಬುಗಳು ಕಾಣಿಸಿಕೊಂಡಿದ್ದವು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಲೋಕೋಪಯೋಗಿ ಇಲಾಖೆ ತಡೆಗೋಡೆ ನಿರ್ಮಿಸಿದ ಸಂಸ್ಥೆಯೊAದಿಗೆ ಸಮಾಲೋಚಿಸಿ ತಡೆಗೋಡೆಯ ಅರ್ಧದಷ್ಟು ಪ್ಯಾನಲ್‌ಗಳನ್ನು ಬಿಚ್ಚಿ ಮರುಅಳವಡಿಕೆಗೆ ಮುಂದಾಗಿದೆ.

ಮಳೆ ಬಂದರೆ ಬರೆಗೆ ನೀರು ಹೋಗದಂತೆ ಬೃಹತ್ ಪ್ಲಾಸ್ಟಿಕ್ ಅನ್ನು ಅಳವಡಿಸಲಾಗಿದೆ. ಮಡಿಕೇರಿ-ಮಂಗಳೂರು ನಡುವಿನ ಹೆದ್ದಾರಿ ಬದಿಯಲ್ಲಿ ಇರುವ ಬೃಹತ್ ಬರೆ ಮಳೆಗಾಲದಲ್ಲಿ ಕುಸಿದರೆ ಅಂತರ ಜಿಲ್ಲಾ ಸಂಚಾರಕ್ಕೆ ಸಮಸ್ಯೆಯಾಗುವ ಹಿನ್ನೆಲೆ ಈ ಯೋಜನೆ ಕಾರ್ಯಗತಗೊಳಿಸಲಾಗಿತ್ತು. ಅಂದಿನ ಶಾಸಕರು ಈ ಯೋಜನೆ ಜಿಲ್ಲೆಗೆ ಸೂಕ್ತವಲ್ಲ ಎಂದು ಬಹಿರಂಗವಾಗಿ ವಿರೋಧಿಸಿದ್ದರು. ಆದರೂ, ಆಡಳಿತ ತಡೆಗೋಡೆ ನಿರ್ಮಿಸಿತ್ತು.