ಭಾಗಮಂಡಲ, ಮೇ ೨೪: ಮನೆಯಲ್ಲಿ ಒಬ್ಬಂಟಿಯಾಗಿದ್ದ ವೃದ್ಧನ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.

ಚೇರಂಬಾಣೆ ಸಮೀಪದ ಬಿ.ಬಾಡಗ ಗ್ರಾಮದ ಆನೇರ ಹರೀಶ್ (೬೩) ಮೃತ ವ್ಯಕ್ತಿ. ಮೃತನ ಪತ್ನಿ, ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದು, ಹರೀಶ್ ಅವರು ಸ್ವಗ್ರಾಮದಲ್ಲಿ ತೋಟ ನೋಡಿಕೊಂಡು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಸೋಮವಾರದಂದು ಬೆಂಗಳೂರಿನಲ್ಲಿರುವ ಪತ್ನಿ ಕರೆ ಮಾಡಿದ ಸಂದರ್ಭ ಸ್ವೀಕರಿಸಿ ಹರೀಶ್ ಮಾತನಾಡಿದ್ದರು. ಅದಾದ ಬಳಿಕ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಆತಂಕಗೊAಡ ಪತ್ನಿ, ಮಗ ಬೆಂಗಳೂರಿನಿAದ ಮನೆಗೆ ಬಂದು ನೋಡಿದ ಸಂದರ್ಭ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಪೊಲೀಸರಿಗೆ ಕುಟುಂಬಸ್ಥರು ವಿಷಯ ತಿಳಿಸಿದ ಹಿನ್ನೆಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಹರೀಶ್ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆ ಹೊರತುಪಡಿಸಿ ಯಾವುದೇ ರೀತಿಯ ಆರ್ಥಿಕ, ಕೌಟುಂಬಿಕ ಸಮಸ್ಯೆಗಳು ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಪೊಲೀಸರು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಒಳಪಡಿಸಿ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.