ಸೋಮವಾರಪೇಟೆ, ಮೇ ೨೪: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ಕಟ್ಟಡದ ಉದ್ಘಾಟನೆಯು ತಾ. ೨೬ರಂದು (ನಾಳೆ) ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿಯ ಎದುರು ೨೬ ಲಕ್ಷ ರೂ.ಗಳ ವೆಚ್ಚದ ನಿವೇಶನದಲ್ಲಿ ೨೩ ಲಕ್ಷ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ತಾ. ೨೬ರಂದು ಬೆಳಿಗ್ಗೆ ೬.೩೦ ರಿಂದ ೮.೩೦ರ ವರೆಗೆ ಗಣಪತಿ ಹೋಮ ನಡೆಯಲಿದೆ. ೧೦ ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥÀರ್ಗೌಡ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ಸಿಂಹ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಬಿ.ಎ.ಜೀವಿಜಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಂದ್ರಕಲಾ ಪ್ರಸನ್ನ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಹುಣಸೂರು ಶಾಸಕ ಜಿ.ಡಿ. ಹರೀಶ್ಗೌಡ ಮತ್ತಿತರರು ಭಾಗವಹಿಸಲಿದ್ದಾರೆ.
ಪಟ್ಟಣ ಪಂಚಾಯಿತಿಯ ಮಾರುಕಟ್ಟೆ ಆವರಣದಲ್ಲಿ ಪಂಚಾಯಿತಿ ನೀಡಿದ ಜಾಗದಲ್ಲಿ ೧೫ ಲಕ್ಷ ರೂ.ಗಳನ್ನು ವೆಚ್ಚ ಮಾಡಿ ಕಟ್ಟಡ ನಿರ್ಮಿಸಿಕೊಳ್ಳಲಾಗಿತ್ತು. ನಂತರ ಪಂಚಾಯಿತಿಯವರೆ ಕಟ್ಟಡ ನೆಲಸಮ ಮಾಡಿದರು. ಅದಕ್ಕೆ ಪರಿಹಾರವೂ ಸಿಗಲಿಲ್ಲ. ಬದಲಿ ಜಾಗವನ್ನೂ ಕೊಡಲಿಲ್ಲ. ದಾನಿಗಳ ಸಹಕಾರದಿಂದ ಹಣವನ್ನು ಸಂಗ್ರಹಿಸಿ, ನಿವೇಶನ ಖರೀದಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ವಾಹನ ಚಾಲಕರಿಗೆ ಇದೊಂದು ಆಸ್ತಿಯಾಗಿದೆ ಎಂದು ಸುರೇಶ್ ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ವಿನ್ಸಿ ಡಿಸೋಜ, ಸಲಹೆಗಾರರಾದ ಡ್ಯಾನಿಯಲ್, ಹಾಲಪ್ಪ ಮತ್ತು ನಿರ್ದೇಶಕ ಬಾಬು ಇದ್ದರು.