ಸುಂಟಿಕೊಪ್ಪ, ಮೇ ೨೪: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಬುಧವಾರ ನಡೆದ ಪಂದ್ಯದಲ್ಲಿ ಹೋರಿಜಾನ್ ಎಫ್.ಸಿ ಬೆಂಗಳೂರು, ಹಾಗೂ ಮೊಗ್ರಾಲ್ ಎಫ್.ಸಿ ಕುಂಬ್ಲೆ ಸೆಮಿ ಫೈನಲ್ ಹಂತಕ್ಕೆ ಪ್ರವೇಶಿಸಿವೆ.
ಹೋರಿಜಾನ್ ಎಫ್.ಸಿ ಬೆಂಗಳೂರು ಮತ್ತು ಫೈರ‍್ಸ್ ಎಫ್.ಸಿ. ಕೂತುಪರಂಬು ನಡುವೆ ನಡೆದ ಪಂದ್ಯದ ಮೊದಲಾರ್ಧದಲ್ಲಿ ಬೆಂಗಳೂರು ತಂಡದ ಮುನ್ನಡೆ ಆಟಗಾರ ಸುಮನ್ ೨೮ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡವನ್ನು ಮುನ್ನಡೆ ತಂದರು. ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಬಿರುಸಿನ ಆಟವಾಡಿದರೂ ಬೆಂಗಳೂರು ತಂಡದ ಸುಮನ್ ೧೨ನೇ ನಿಮಿಷದಲ್ಲಿ ೨ನೇ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಬೆಂಗಳೂರು ತಂಡದ ಮತ್ತೊಬ್ಬ ಆಟಗಾರ ರೂಪೇಶ್ ೨೧ನೇ ನಿಮಿಷದಲ್ಲಿ ಹಾಗೂ ೨೩ನೇ ನಿಮಿಷದಲ್ಲಿ ಗೋಲು ಗಳಿಸಿದ ಕಾರಣ ಬೆಂಗಳೂರು ತಂಡವು ೪ ಗೋಲುಗಳಿಂದ ಮುನ್ನಡೆ ಸಾಧಿಸಿತು. ಕೂತುಪರಂಬು ತಂಡದ ಆಟಗಾರ ಅಜು ೨೬ನೇ ನಿಮಿಷದಲ್ಲಿ ೧ ಗೋಲು ಗಳಿಸುವಲ್ಲಿ ಸಫಲರಾದರು. ಬೆಂಗಳೂರು ತಂಡ ೪-೧ ಗೋಲುಗಳಿಂದ ಕೂತುಪರಂಬು ತಂಡವನ್ನು ಮಣಿಸಿ ಸೆಮಿ ಫೈನಲ್ ಹಂತಕ್ಕೆ ಮುನ್ನುಗ್ಗಿತು.
ಎರಡನೇ ಪಂದ್ಯವು ಮೊಗ್ರಾಲ್ ಎಫ್.ಸಿ ಕುಂಬ್ಲೆ ಹಾಗೂ ವಿಜಯನಗರ ಎಫ್.ಸಿ. ಮೈಸೂರು ತಂಡಗಳ ನಡುವೆ ನಡೆಯಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ದ್ವಿತಿಯಾರ್ಧದಲ್ಲಿ ಮೊಗ್ರಾಲ್ ಕುಂಬ್ಲೆ ತಂಡದ ಆಟಗಾರ ಕಾಲಿದ್ ೧೭ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮೊಗ್ರಾಲ್ ಕುಂಬ್ಲೆ ತಂಡ ಸೆಮಿ ಫೈನಲ್ ಹಂತಕ್ಕೆ ತಲುಪಿತು.