ಮಡಿಕೇರಿ, ಮೇ ೨೪: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಟಿ೧೦ ಲೆದರ್‌ಬಾಲ್ ಕ್ರಿಕೆಟ್ ಟೂರ್ನಿಯ ಐದನೇ ದಿನದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಾಫಿ ಕ್ರಿಕೆಟರ್ಸ್ ನಿಗದಿತ ೧೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೧೬ ರನ್ ಗಳಿಸಿತು. ತಂಡದ ಪ್ರಮುಖ ಆಟಗಾರ ಅನಿಲ್ ಕುಡೆಕಲ್ ೧೧ ಬೌಂಡರಿ ಮತ್ತು ೩ ಸಿಕ್ಸರ್‌ಗಳೊಂದಿಗೆ ೭೬ (೩೪) ರನ್ ಗಳಿಸಿದರು. ಆ ಮೂಲಕ ನಿನ್ನೆಯ ಪಂದ್ಯಾಟದಲ್ಲಿ ಕೀಜನ ಯತೀಶ್ ಅವರು ಗಳಿಸಿದ ಅತ್ಯಧಿಕ ೫೩ ರನ್‌ಗಳ ದಾಖಲೆಯನ್ನು ಅನಿಲ್ ಕುಡೆಕಲ್ ಮುರಿದರು. ಕೋಡಿ ಹರ್ಷ ೩ ವಿಕೆಟ್ ಕಬಳಿಸುವ ಮೂಲಕ ಯಶಸ್ವೀ ಬೌಲರ್ ಎನಿಸಿದರು.

ನಂತರ ಬ್ಯಾಟ್ ಮಾಡಿದ ಜಿ.ಕಿಂಗ್ಸ್ ೧೦ ಓವರ್‌ನಲ್ಲಿ ೬ ವಿಕೆಟ್ ನಷ್ಟಕ್ಕೆ ೯೯ ರನ್ ಗಳಿಸಿ ಸೋಲೊಪ್ಪಿಕೊಂಡಿತು. ತೊತ್ತಿಯನ ರಾಕೇಶ್ ೪ ಬೌಂಡರಿ ೧ ಸಿಕ್ಸರ್ ಮೂಲಕ ೨೬ (೨೦) ರನ್ ಗಳಿಸಿದರು. ಜಯಪ್ರಕಾಶ್ ಮಾವಾಜಿ ೩ ವಿಕೆಟ್ ಪಡೆದು ಗಮನ ಸೆಳೆದರು. ಅನಿಲ್ ಕುಡೆಕಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು. ಎರಡನೇ ಪಂದ್ಯಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಮ್ ಭಗವತಿ ನಿಗದಿತ ೧೦ ಓವರಿನಲ್ಲಿ ೫ ವಿಕೆಟ್ ನಷ್ಟಕ್ಕೆ ೮೯ ರನ್ ಗಳಿಸಿತು. ಕೊಂಬಾರನ ರಂಜು ೩೪ (೧೯), ಯುವ ಆಟಗಾರ ಬೇಕಲ್ ವರುಣ್ ರಾಜ್ ೨೮ (೨೦) ರನ್ ಗಳಿಸಿದರು. ನಂತರ ಬ್ಯಾಟ್ ಮಾಡಿದ ಕಾಫಿ ಕ್ರಿಕೆಟರ್ಸ್ ೮.೪ ಓವರಿನಲ್ಲಿ ೨ ವಿಕೆಟ್ ನಷ್ಟಕ್ಕೆ ೯೩ ರನ್ ಗಳಿಸಿ ಟೂರ್ನಮೆಂಟಿನ ಎ ಪೂಲ್ ಟೇಬಲ್ ಟಾಪರ್ಸ್ ಆಗಿ ಹೊರಹೊಮ್ಮಿತು. ಕಾಫಿ ಕ್ರಿಕೆಟರ್ಸ್ ಪರ ವಿವಾನ್ ೨ ಬೌಂಡರಿ ಮತ್ತು ೨ ಸಿಕ್ಸರ್ ಮೂಲಕ ೩೫ (೧೯) ರನ್, ಅನಿಲ್ ಕುಡೆಕಲ್ ೩೩ (೧೯) ರನ್ ಗಳಿಸಿದರು. ಪ್ಲೇಯರ್ ಆಫ್ ದಿ ಮ್ಯಾಚ್ ವಿವಾನ್ ಪಡೆದರು. ಶನಿವಾರ ಬೆಳಿಗ್ಗೆ ೯ ಗಂಟೆಗೆ ನಡೆಯುವ ಕ್ವಾಲಿಫ್ಲೆöÊರ್ ಒನ್ ಪಂದ್ಯದಲ್ಲಿ ಟೀಮ್ ಎಲೀಟ್ ತಂಡವನ್ನು ಕಾಫಿ ಕ್ರಿಕೆಟರ್ಸ್ ಎದುರಿಸಲಿದೆ. ಇದರಲ್ಲಿ ಗೆದ್ದವರು ನೇರವಾಗಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯುತ್ತಾರೆ. ಬೆಳಿಗ್ಗೆ ೧೧.೩೦ಕ್ಕೆ ಎಲಿಮಿನೇಟರ್ ಪಂದ್ಯದಲ್ಲಿ ಎಂಸಿಬಿ ತಂಡವನ್ನು ಟೀಮ್ ಭಗವತಿ ಎದುರಿಸಲಿದೆ.