ಕರಿಕೆ, ಮೇ ೨೩: ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನಶಾಸ್ತಾವು ಹಾಗೂ ಕರಿಚಾಮುಂಡಿ ದೇವಾಲಯದ ವಾರ್ಷಿಕ ಪ್ರತಿಷ್ಠಾ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ದೇವಾಲಯದ ಆವರಣದಲ್ಲಿ ಗಣಹೋಮದೊಂದಿಗೆ ಆರಂಭವಾಗಿ, ಶ್ರೀ ವನಶಾಸ್ತಾವು ದೇವರಿಗೆ ಕ್ಷೀರ ಅಭಿಷೇಕ, ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ಮಹಾಪೂಜೆ ನೆರವೇರಿತು. ನಂತರ ಸುಬ್ರಹ್ಮಣ್ಯ ದೇವರಿಗೆ ಅಭಿಷೇಕ ಸೇರಿದಂತೆ ಇತರೆ ಸೇವೆ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿಗಳಾದ ಕಾಸರಗೋಡುವಿನ ವೇದ ಮೂರ್ತಿ ಶ್ರೀ ಶ್ರೀಪತಿ ಅರಳಿತ್ತಾಯ ನೇತೃತ್ವದಲ್ಲಿ ಅವರ ಬಳಗದವರು ನೆರವೇರಿಸಿದರು.
ನಂತರ ಚಾಮುಂಡಿ ಹಾಗೂ ಗುಳಿಗ ದೈವಗಳಿಗೆ ವಾರ್ಷಿಕ ಆರಾಧನೆ ನಡೆಯಿತು. ವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ದೇವಾಲಯದ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಕೆ.ಎ., ಕಾರ್ಯದರ್ಶಿ ತಾರೇಶ್ ಹೊದ್ದೆಟ್ಟಿ, ಉಪಾಧ್ಯಕ್ಷರಾದ ಬಾಲಕೃಷ್ಣ ಕೆ.ಡಿ.ಸಮಿತಿ ಸದಸ್ಯರು, ಗ್ರಾಮಸ್ಥರು, ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು. ಸ್ಥಳೀಯ ಯುವಕರ ತಂಡ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.