ಹಿರಿಯ ನಾಗರಿಕರ ವೇದಿಕೆಯಿಂದ ಮುಖ್ಯಮಂತ್ರಿಗೆ ಪತ್ರ
ಮಡಿಕೇರಿ, ಮೇ ೨೩ : ಪೊನ್ನಂಪೇಟೆ ತಾಲೂಕು ರಚನೆಯಾಗಿ ೨ ವರ್ಷಗಳು ಕಳೆದರೂ ತಾಲೂಕು ಕಾರ್ಯಗತವಾಗಲು ವಿಫಲವಾಗಿದ್ದು, ನೂತನ ಕಚೇರಿಯೊಂದನ್ನು ನಿರ್ಮಿಸಿ ತಾಲೂಕಿನ ವಿವಿಧ ಕೆಲಸ ಕಾರ್ಯಗಳಿಗೆ ಸಹಕಾರಿಯಾಗುವಂತೆ ಮಾಡಿ ತಾಲೂಕನ್ನು ಕಾರ್ಯಗತ ಮಾಡುವಂತೆ ಕಿಗ್ಗಟ್ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ತಾಲೂಕಿನಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ ಸರಿಪಡಿಸಲು, ಗೋಣಿಕೊಪ್ಪ ಬಸ್ ನಿಲ್ದಾಣ ನಿರ್ಮಿಸಲು, ದ.ಕೊಡಗಿನಲ್ಲಿ ದೊಡ್ಡ ಸಮಸ್ಯೆಯಾಗಿರುವ ಕಾಡು ಪ್ರಾಣಿ ಮಾನವ ಸಂಘರ್ಷ ವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆಯೂ ಪತ್ರದ ಮೂಲಕ ಮನವಿ ಮಾಡಲಾಗಿದೆ. ಪೊನ್ನಂಪೇಟೆಗೆ ಒಂದು ಹೈಟೆಕ್ ಆಸ್ಪತ್ರೆ, ಹಿರಿಯ ನಾಗರಿಕರ ವೇದಿಕೆಗೆ ನಿವೇಶನ ನೀಡಿ ಅದರಲ್ಲಿ ಒಂದು ಕಚೇರಿ ನಿರ್ಮಾಣ ಮಾಡು ವಂತೆಯೂ ಕೋರಲಾಗಿದೆ. ವೀರಾಜಪೇಟೆಯ ನೂತನ ಎಂ.ಎಲ್.ಎ. ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನವನ್ನು ನೀಡುವಂತೆಯೂ ಮನವಿ ಮಾಡಲಾಗಿದೆ.