ಪೊನ್ನಂಪೇಟೆ, ಮೇ ೨೩: ವ್ಯಕ್ತಿಗಳ ಬಳಿ ಇರುವ ಕೆಲವು ಉಪಯೋಗದ ವಸ್ತುಗಳ ಬಗ್ಗೆ ಬಹಳಷ್ಟು ಜನರಿಗೆ ಭಾವನಾತ್ಮಕವಾದ ಸಂಬAಧವಿರುತ್ತದೆ. ಒಮ್ಮೊಮ್ಮೆ ಈ ರೀತಿಯ ವಸ್ತುಗಳು ಕಳೆದುಕೊಂಡರೆ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಭಾವ ವ್ಯಕ್ತವಾಗುತ್ತದೆ. ಪ್ರೀತಿಯಿಂದ ಕಾಪಾಡಿಕೊಂಡು ಬಂದ ಈ ರೀತಿಯ ಕೆಲವು ವಸ್ತುಗಳು ವ್ಯಕ್ತಿಗಳ ಕೈಯಿಂದ ದಿಢೀರ್ ಆಗಿ ಕಾಣೆಯಾದರೆ ಅದನ್ನು ಮರಳಿ ಪಡೆಯಲು ಯಾವುದೇ ತ್ಯಾಗಕ್ಕೂ ಸಿದ್ಧರಾಗುವ ಜನರಿದ್ದಾರೆ. ಹಾಗೆ ಹಲವು ವರ್ಷಗಳಿಂದ ತನಗೆ `ಸಮಯ ಪ್ರಜ್ಞೆ' ಮೂಡಿಸುತ್ತಿದ್ದ ವಾಚೊಂದನ್ನು ಕೇರಳ ಮೂಲದ ವ್ಯಕ್ತಿಯೊಬ್ಬರು ಕೊಡಗಿನ ಗಡಿ ಕೊಪ್ಪದಲ್ಲಿ ಕಳೆದುಕೊಂಡಾಗ ಅದನ್ನು ಮರಳಿ ಪಡೆಯಲು ಅವರು ಶ್ರಮಪಟ್ಟ ಸಿನಿಮಿಯ ಮಾದರಿ ಕಥೆಯಿದು.

ಕೇರಳದ ಕಣ್ಣಾನೂರು ಜಿಲ್ಲೆಯ ಪಾನೂರಿನ ನಿವಾಸಿಯಾದ ಅಲಿ ಮತ್ತು ಕುಟುಂಬಸ್ಥರು ಇತ್ತೀಚಿಗೆ ಕೊಡಗು ಜಿಲ್ಲೆಗೆ ಪ್ರವಾಸಕ್ಕಾಗಿ ಬಂದಿದ್ದರು. ಕುಶಾಲನಗರ ಪಟ್ಟಣದಲ್ಲಿ ಸುತ್ತಾಡಿ ಮಧ್ಯಾಹ್ನದ ವೇಳೆಗೆ ಸಮೀಪದ ಕೊಪ್ಪದಲ್ಲಿರುವ ನಾಮ್ಡೊçÃಲಿಂಗ್ ಮೊನಾಸ್ಟರಿ ಗೋಲ್ಡನ್ ಟೆಂಪಲ್ ಅನ್ನು ವೀಕ್ಷಿಸಿದ ಬಳಿಕ ಸಮೀಪದ ಹೊಟೇಲೊಂದಕ್ಕೆ ಊಟಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಅಲಿ ಅವರ ಕೈಯಲ್ಲಿದ್ದ ರೂ.೧ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ರ‍್ಯಾಡೋ ಕಂಪನಿಯ ವಾಚು ಆಕಸ್ಮಿಕವಾಗಿ ಕಾಣೆಯಾಯಿತು.

ಪ್ರವಾಸ ಮುಗಿಸಿ ಕೇರಳದ ತನ್ನ ಮನೆಗೆ ತಲುಪಿದ ನಂತರ ಅಲಿ ಅವರಿಗೆ ತನ್ನ ಪ್ರೀತಿಯ ವಾಚ್ ಕಾಣೆಯಾದ ವಿಷಯ ತಿಳಿಯುತ್ತದೆ. ಕಳೆದ ಹಲವು ವರ್ಷಗಳಿಂದ ತನ್ನ ಕೈಗೆ ಕಳೆ ತಂದುಕೊಡುತ್ತಿದ್ದ ಈ ರ‍್ಯಾಡೋ ವಾಚ್ ಕಾಣೆಯಾಗಿರುವುದು ಅಲಿ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಷಯವನ್ನು ತನ್ನ ಮಗಳ ಗಂಡ ಸಹದ್ ಮತ್ತು ಅಣ್ಣ ನೌಶಾದ್ ಬಳಿ ಹೇಳಿಕೊಂಡ ಅಲಿ, ಗೋಲ್ಡನ್ ಟೆಂಪಲ್ ಸಮೀಪದ ಹೊಟೇಲ್‌ಗೆ ಊಟಕ್ಕೆ ತೆರಳುವರೆಗೂ ತನ್ನ ಕೈಯಲ್ಲಿ ವಾಚ್ ಇತ್ತು ಎಂದು ದೃಢಪಡಿಸಿದ್ದಾರೆ. ಇದರಿಂದಾಗಿ ಈ ವಾಚ್ ಹೊಟೇಲ್ ಬಳಿಯೇ ಕಾಣೆಯಾಗಿರಬಹುದು ಎಂಬ ಬಲವಾದ ಸಂಶಯ ವ್ಯಕ್ತಪಡಿಸಿದಾಗ ಮರುದಿನ ಬೆಳಿಗ್ಗೆಯೇ ಕೊಪ್ಪಕ್ಕೆ ಹೊರಡಲು ಅಲಿ ಸಿದ್ಧರಾಗುತ್ತಾರೆ.

ಕಾಣೆಯಾದ ತನ್ನ ರ‍್ಯಾಡೋ ವಾಚ್‌ನ್ನು ಪತ್ತೆ ಹಚ್ಚುವ ಏಕೈಕ ಉದ್ದೇಶದಿಂದ ಪಾನೂರಿಂದ ೧೨೦ ಕಿ.ಮೀ. ದೂರದ ಕೊಪ್ಪಕ್ಕೆ ಬಂದ ಅಲಿ ಮತ್ತು ಸಂಗಡಿಗರು ಸೀದಾ ಅಂದು ಮಧ್ಯಾಹ್ನ ಊಟ ಮಾಡಿದ ಹೊಟೇಲಿಗೆ ತೆರಳಿ ಅಲ್ಲಿನ ಸಂಬAಧಪಟ್ಟವರಲ್ಲಿ ವಿಚಾರಿಸುತ್ತಾರೆ. ಅಂದು ಹೊಟೇಲ್‌ನಲ್ಲಿ ಯಾವುದೇ ವಾಚು ಪತ್ತೆಯಾಗಿರುವುದಿಲ್ಲ. ಒಂದು ವೇಳೆ ವಾಚ್ ಮೇಜಿನಲ್ಲಿ ಇದ್ದಿದ್ದರೆ ಅದು ತ್ಯಾಜ್ಯ ಗುಂಡಿ ಸೇರಿರುತ್ತದೆ. ಗ್ರಾಹಕರು ಊಟ ಮಾಡಿದ ನಂತರ ಸಿಬ್ಬಂದಿ ಮೇಜನ್ನು ಶುಚಿಗೊಳಿಸುವಾಗ ಅಲ್ಲಿರುವ ತ್ಯಾಜ್ಯಗಳನ್ನೆಲ್ಲ ಪ್ಲಾಸ್ಟಿಕ್ ಚೀಲವೊಂದರಲ್ಲಿ ಸಂಗ್ರಹಿಸಿ ನಂತರ ಗ್ರಾ.ಪಂ.ನಿAದ ಬರುವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಲಾಗುತ್ತದೆ ಎಂದು ವಿವರಿಸಿದರು. ಒಂದು ವೇಳೆ ಈ ತ್ಯಾಜ್ಯದೊಳಗೆ ಆ ವಾಚು ಸೇರಿಕೊಂಡಿದ್ದರೂ ಅದು ಪತ್ತೆಯಾಗುವುದು ಕಷ್ಟದ ಕೆಲಸ ಎಂದು ಹೊಟೇಲ್‌ನವರು ತಿಳಿಸುತ್ತಾರೆ.

ಆದರೆ ಇದರಿಂದ ಸಮಾಧಾನಗೊಳ್ಳದ ಅಲಿ ಅವರು ತ್ಯಾಜ್ಯವನ್ನು ಸಂಗ್ರಹಿಸುವ ಕೊಪ್ಪ ಗ್ರಾ.ಪಂ. ಕಚೇರಿಗೆ ತೆರಳಿ ತನ್ನ ವಾಚ್ ಕಾಣೆಯಾದ ಬಗ್ಗೆ ಮತ್ತು ಅದು ಹೊಟೇಲೊಂದರ ತ್ಯಾಜ್ಯದೊಂದಿಗೆ ಸೇರಿಕೊಂಡಿರುವ ಸಂಶಯದ ಬಗ್ಗೆ ತಿಳಿಸುತ್ತಾರೆ. ಬೆಲೆಬಾಳುವ ವಾಚ್ ಕಾಣೆಯಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳದ ಈ ವ್ಯಕ್ತಿಯ ಆತಂಕವನ್ನು ಸೂಕ್ಷö್ಮವಾಗಿ ತಿಳಿದ ಸ್ಥಳದಲ್ಲಿದ್ದ ಕೊಪ್ಪ ಗ್ರಾ. ಪಂ. ಸದಸ್ಯರಾದ ಸುರೇಶ್, ವಾಚನ್ನು ಪತ್ತೆಹಚ್ಚಲು ನೆರವಾಗುವ ಉದ್ದೇಶದಿಂದ ಗ್ರಾ. ಪಂ. ವತಿಯಿಂದ ಪ್ರತಿನಿತ್ಯ ತ್ಯಾಜ್ಯಗಳನ್ನು ಸಂಗ್ರಹಿಸಿ ಬಳಿಕ ವಿಲೇವಾರಿಗೊಳಿಸುವ ಸ್ಥಳಕ್ಕೆ ಅಲಿ ಮತ್ತು ಸಂಗಡಿಗರನ್ನು ಕರೆದುಕೊಂಡು ಹೊರಟೇಬಿಟ್ಟರು.

ಹೇಗಾದರೂ ಮಾಡಿ ತನ್ನ ಪ್ರೀತಿಯ ವಾಚನ್ನು ಹುಡುಕಿಯೇ ತೀರುತ್ತೇನೆಂದು ಹಠ ತೊಟ್ಟಂತಿದ್ದ ಅಲಿ ಮತ್ತು ಸಂಗಡಿಗರು ತ್ಯಾಜ್ಯ ಗುಂಡಿಯಲ್ಲಿ ೨ಗಂಟೆಗೂ ಹೆಚ್ಚು ಕಾಲ ಸತತವಾಗಿ ಹುಡುಕಾಟ ನಡೆಸಿದರು. ವಾಚ್‌ಗಾಗಿ ದುರ್ವಾಸನೆಯನ್ನೂ ಸಹಿಸಿಕೊಂಡು ಗುಂಡಿಯಲ್ಲಿದ್ದ ಪ್ರತೀ ತ್ಯಾಜ್ಯವನ್ನು ಸೂಕ್ಷ್ಮವಾಗಿ ಹುಡುಕಾಡುತ್ತಿದ್ದ ನಡುವೆ ಅಲಿ ಅವರ ಪ್ರೀತಿಯ ರಾಡೋ ವಾಚು ದೊರತೇ ಬಿಟ್ಟಿತು. ಎರಡು ದಿನಗಳ ಕಾಲ ತ್ಯಾಜ್ಯಗುಂಡಿಯಲ್ಲಿ ಅನಾಥವಾಗಿ ತ್ಯಾಜ್ಯಗಳೊಂದಿಗೆ ಬೆರೆತಿದ್ದರೂ ವಾಚಿಗೆ ಯಾವುದೇ ಹಾನಿ ಸಂಭವಿಸಿರಲಿಲ್ಲ. ಕಳೆದು ಹೋದ ತನ್ನ ಪ್ರೀತಿಯ ರಾಡೋ ವಾಚನ್ನು ಮರಳಿ ಪಡೆದ ಅತೀವ ಸಂತೋಷದಲ್ಲಿ ತೇಲಾಡಿದ ಅಲಿ, ಇದಕ್ಕಾಗಿ ಸಹಕರಿಸಿದ ಕೊಪ್ಪ ಗ್ರಾ. ಪಂ.ಸದಸ್ಯರಾದ ಸುರೇಶ್ ಅವರ ವಿಶೇಷ ಗುಣಕ್ಕೆ ಶಿರಬಾಗಿ ನಮಿಸಿ ಕೃತಜ್ಞತೆಗಳನ್ನು ಅರ್ಪಿಸಿ ಕೇರಳದತ್ತ ಪ್ರಯಾಣ ಬೆಳೆಸಿದರು.

-ರಫೀಕ್ ತೂಚಮಕೇರಿ