ಸಿದ್ದಾಪುರ, ಮೇ ೨೩: ಸಿದ್ದಾಪುರ ಹಾಗೂ ಅಮ್ಮತ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಮ್ಮತ್ತಿ ಹೋಬಳಿಯ ಹೊಸೂರು ಹಾಗೂ ಪಾಲಿಬೆಟ್ಟ ಮತ್ತು ಇಂಜಿಲಗೆರೆ ಪುಲಿಯೇರಿ ಭಾಗದಲ್ಲಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೇ ಕೃಷಿ ಫಸಲುಗಳನ್ನು ಹಾನಿಗೊಳಿಸುತ್ತಾ ಮಾನವನ ಮೇಲೆ ದಾಳಿ ನಡೆಸುತ್ತಿದೆ. ಕಳೆದ ೧ ತಿಂಗಳ ಒಳಗೆ ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರೊಬ್ಬರು ಸೇರಿದಂತೆ ಈರ್ವರು ಕಾರ್ಮಿಕರ ಮೇಲೆ ಕಾಡಾನೆಗಳು ದಾಳಿ ನಡೆಸಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ.
ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವುದು ಭಯಕ್ಕೆ ಕಾರಣವಾಗಿದೆ. ಇದರಿಂದಾಗಿ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ತೋಟದ ಒಳಗೆ ತೆರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರ ದಂದು ರಾತ್ರಿ ಇಂಜಿಲಗೆರೆಯ ಪುಲಿಯೇರಿ ಗ್ರಾಮದಲ್ಲಿ ಚೋವಂಡ ವಾಸು ಪೊನ್ನಪ್ಪ ಎಂಬವರ ಕಾಫಿ ತೋಟದ ಒಳಗೆ ಕಾಡಾನೆಗಳು ದಾಂಧಲೆ ನಡೆಸಿ ಅವರ ತೋಟದ ಗೇಟಿನ ಕಂಬಗಳನ್ನು ಹಾನಿಗೊಳಿಸಿ ಅಪಾರ ನಷ್ಟ ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಅಮ್ಮತ್ತಿ ಪುಲಿಯೇರಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಈ ಹಿಂದೆ ಅಮ್ಮತ್ತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಯೊಂದನ್ನು ಸೆರೆÀ ಹಿಡಿಯಲು ಸರ್ಕಾರವು ಆದೇಶ ನೀಡಿತ್ತು. ಆದರೆ ಈವರೆಗೂ ಕಾಡಾನೆಯನ್ನು ಸೆರೆ ಹಿಡಿಯದೇ ಇರುವುದರಿಂದ ಕಾಡಾನೆಯ ಉಪಟಳವು ಹೆಚ್ಚಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಿದ್ದಾಪುರದ ಕರಡಿಗೋಡು ಹೇರೂರು, ಗುಹ್ಯ ಭಾಗದಲ್ಲಿ ಕೂಡ ಕಾಡಾನೆಗಳ ಉಪಟಳವು ತೀವ್ರವಾಗಿದ್ದು, ಒಂಟಿ ಸಲಗವೊಂದು ದಿನನಿತ್ಯ ರಾತ್ರಿ ಸಮಯದಲ್ಲಿ ಸಂಚರಿಸುತ್ತಿದ್ದು, ಕರಡಿಗೋಡು ಗ್ರಾಮದ ಜನವಸತಿ ಪ್ರದೇಶದಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ.
ಇತ್ತೀಚೆಗೆ ಸಿದ್ದಾಪುರದ ಮೈಸೂರು ರಸ್ತೆಯ ಬಡಾವಣೆಯೊಂದರಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಹಾಡಹಗಲೇ ಕಾಡಾನೆಯೊಂದು ಮೈದಾನಕ್ಕೆ ನುಗ್ಗಿತ್ತು. ಇದಲ್ಲದೇ ಕಳೆದ ಕೆಲವು ದಿನಗಳಿಂದ ಸಿದ್ದಾಪುರದ ಬಸ್ ನಿಲ್ದಾಣದ ಪಟ್ಟಣ ವ್ಯಾಪ್ತಿಯಲ್ಲಿ ಕಾಡಾನೆಯು ರಾಜಾರೋಷವಾಗಿ ಸುತ್ತಾಡಿತ್ತು. ಇದೀಗ ಕಾಫಿ ತೋಟಗಳಲ್ಲಿ ಹಲಸಿನ ಕಾಯಿಗಳನ್ನು ತಿನ್ನಲು ಬರುವ ಕಾಡಾನೆಗಳು ಮರಿಯಾನೆ ಗಳೊಂದಿಗೆ ತೋಟಗಳಲ್ಲೇ ಬೀಡುಬಿಟ್ಟಿವೆ. ಅರಣ್ಯ ಇಲಾಖಾಧಿ ಕಾರಿಗಳು ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರೂ ಕೂಡ ಕಾಡಾನೆಗಳು ಮರಳಿ ಕಾಫಿ ತೋಟದತ್ತ ಹಿಂತಿರುಗಿ ಬರುತ್ತಿವೆೆ. ಇದರಿಂದಾಗಿ ಇಲಾಖಾಧಿಕಾರಿ ಗಳಿಗೆ ಹಾಗೂ ಸಿಬ್ಬಂದಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಕೂಡಲೇ ನೂತನ ಸರ್ಕಾರದ ಪ್ರತಿನಿಧಿಗಳು ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ವಾಸು