ಮಡಿಕೇರಿ, ಮೇ ೨೩: ಹೆಸರಾಂತ ಪ್ರವಾಸಿ ತಾಣ ಮಾಂದಲಪಟ್ಟಿಗೆ ಬಿಳಿ ಸಂಖ್ಯಾ ಫಲಕದ ವಾಹನಗಳಲ್ಲಿ ಪ್ರವಾಸಿಗರನ್ನು ಬಾಡಿಗೆ ಕೊಂಡೊಯ್ಯುವುದಕ್ಕೆ ಪೊಲೀಸ್ ಇಲಾಖೆ ಅವಕಾಶ ನೀಡುತ್ತಿಲ್ಲ. ಇದುವರೆಗೂ ಬಿಳಿ ಸಂಖ್ಯಾ ಫಲಕವಿರುವ ವಾಹನಗಳ ಚಾಲಕರು, ಮಾಲೀಕರು ಪ್ರವಾಸಿಗರನ್ನು ಮಾಂದಲಪಟ್ಟಿಗೆ ಬಾಡಿಗೆ ಕರೆದೊಯ್ಯುತ್ತಿದ್ದರು. ಈ ನಡುವೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಂದ ಕೆಲವೊಂದು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮಾಂದಲಪಟ್ಟಿಗೆ ಬಿಳಿ ಸಂಖ್ಯಾ ಫಲಕದ ವಾಹನಗಳಲ್ಲಿ ಪ್ರವಾಸಿಗರನ್ನು ಕೊಂಡೊಯ್ಯುವುದಕ್ಕೆ ಅವಕಾಶ ನೀಡುತ್ತಿಲ್ಲ. ಒಂದು ವೇಳೆ ಕೊಂಡೊಯ್ದರೆ ಅಂತಹ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ. ಎರಡು-ಮೂರು ದಿನಗಳಿಂದೀಚೆಗೆ ಸುಮಾರು ೪೫ ಪ್ರಕರಣಗಳನ್ನು ಪೊಲೀಸ್ ಇಲಾಖೆ ದಾಖಲು ಮಾಡಿಕೊಂಡಿದೆ.