ಮಡಿಕೇರಿ, ಮೇ ೨೩: ರಾಜ್ಯದಲ್ಲಿ ೫ ಮುಸ್ಲಿಂ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಬಲ ಖಾತೆಯೊಂದಿಗೆ ಜಿಲ್ಲೆಯ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಎಂ.ಎಲ್.ಸಿ. ಸ್ಥಾನ ನೀಡುವಂತೆ ಕರ್ನಾಟಕ ಮುಸ್ಲಿಂ ಯೂನಿಟಿ ಸಂಘಟನೆ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಇಸಾಕ್ ಖಾನ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಬೆಂಬಲ ಕಾರಣವಾಗಿದೆ. ಮುಸ್ಲಿಂ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಈ ಹಿನ್ನೆಲೆ ಸಮುದಾಯ ಒಬ್ಬರಿ ಉಪಮುಖ್ಯಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ, ರಾಜಕೀಯ ಬೆಳವಣಿಗೆಯಿಂದ ಇದು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯ ಕ್ಯಾಬಿನೆಟ್ ನಲ್ಲಿ ಮುಸ್ಲಿಂನ ೫ ಶಾಸಕರಿಗೆ ಗೃಹ, ಉನ್ನತ ಶಿಕ್ಷಣ, ಕೈಗಾರಿಕೆಯಂತಹ ಸಚಿವ ಸ್ಥಾನ ನೀಡಬೇಕು. ನಮ್ಮ ಸಮುದಾಯಕ್ಕೆ ಭಾಗ್ಯ, ಜಯಂತಿಗಳು ಬೇಕಿಲ್ಲ. ಅಧಿಕಾರಕ್ಕೆ ಬೇಕಿದೆ. ಇದರಿಂದ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಕೊಡಗಿನ ೨ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಅಧಿಕೃತ ಘೋಷಣೆಗೂ ಮುನ್ನ ಮುಸ್ಲಿಂ ಸಮುದಾಯ ಬೇಷರತ್ತು ಬೆಂಬಲ ಕಾಂಗ್ರೆಸ್ಗೆ ನೀಡಿದೆ. ಇದನ್ನು ಅರಿತು ಜಿಲ್ಲೆಯ ಮುಸ್ಲಿಂ ವ್ಯಕ್ತಿಗೆ ಎಂ.ಎಲ್.ಸಿ. ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಎ. ಶಬೀರ್, ಎಂ.ಎ. ಇಬ್ರಾಹಿಂ, ಎಂ.ಎA. ಕಲಂದರ್, ಎಂ.ಇ. ಇಬ್ರಾಹಿಂ ಹಾಜರಿದ್ದರು.