ಸುಂಟಿಕೊಪ್ಪ, ಮೇ ೨೨: ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ೭ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಸೂಕ್ತ ಚಿಕಿತ್ಸೆಯ ಹಿನ್ನೆಲೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಜನತೆ ಯಾವುದೇ ಅಂತಕ ಪಡುವ ಅವಶ್ಯಕತೆ ಇಲ್ಲವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ ೧೫ ದಿನಗಳಿಂದ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯ ನಿವಾಸಿಗಳಲ್ಲಿ ಅತಿಯಾಗಿ ಜ್ವರ, ಶೀತ, ಕೆಮ್ಮು ಸಾಮಾನ್ಯವಾಗಿ ಕಂಡುಬರುತ್ತಿದೆ. ಸಾರ್ವಜನಿಕರು ಮನೆಯ ಸುತ್ತ ಮುತ್ತ ಸ್ವಚ್ಛ ಪರಿಸರವನ್ನು ಕಾಪಾಡಿಕೊಂಡು ಸೊಳ್ಳೆ ಕಾಟ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ನಂತರ ಪ್ರಾಥಮಿಕ ಆರೋಗ್ಯದ ವತಿಯಿಂದ ಆಯೋಜಿಸಲಾದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಆರೋಗ್ಯ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು, ಎಸ್.ಎಂ.ಎಸ್. ಅರಬ್ಬಿ ಕಾಲೇಜಿನ ವಿದ್ಯಾರ್ಥಿಗಳು ಡೆಂಗ್ಯೂ ಬಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ಕರಪತ್ರ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭ ಸುಂಟಿಕೊಪ್ಪ ಪ್ರಾಥಮಿಕ ವೈದ್ಯಾಧಿಕಾರಿ ಡಾ. ಪ್ರಗತಿ, ಬಿಎಚ್‌ಇಓ (ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ) ಹೆಚ್.ಕೆ. ಶಾಂತಿ, ಹೇಲ್ತ್ ಇನ್ಸ್ಪೆಕ್ಟರ್‌ಗಳಾದ ಶ್ರೀನಿವಾಸ್, ಅರುಳಪ್ಪ, ಮುತ್ತುರಾಜ್, ಜನಾರ್ಧನ, ವಿಶ್ವಜ್ಞ, ಆರೋಗ್ಯ ಕಾರ್ಯಕರ್ತೆಯರು ಗಳಾದ ಪ್ರೇಮ, ಯೋಗಿಣಿ, ಕವಿತ, ಜ್ಯೋತಿ ಭಾಸ್ಕರ್ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್ ಇದ್ದರು.