ಗೋಣಿಕೊಪ್ಪಲು, ಮೇ ೨೨: ನಿನ್ನೆ ದಿನ ಬೆಳ್ಳೂರಿನ ಕಾಫಿ ತೋಟದಲ್ಲಿ ಮನುಷ್ಯನ ಕಾಲೊಂದು ಪತ್ತೆಯಾದ ಘಟನೆಗೆ ಸಂಬAಧಿಸಿದAತೆ ಅದು ಮಹಿಳೆಯೊಬ್ಬಳ ಕಾಲು ಎಂದು ದೃಢಪಟ್ಟಿದೆ.
ಈ ಪ್ರಕರಣವನ್ನು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಸಂದರ್ಭ ಕಾಲು ಸ್ಥಳೀಯ ಕಾರ್ಮಿಕ ಮಹಿಳೆ ಪರಿಶಿಷ್ಟ ಪಂಗಡದ ಚೋಂದು (೨೫) ಎಂಬಾಕೆಯದ್ದು ಎಂದು ತಿಳಿದುಬಂದಿದೆ.
ಶೋಧ ಕಾರ್ಯ ನಡೆಸಿದ ವೇಳೆ ಚೋಂದುವಿಗೆ ಸೇರಿದ ಬಟ್ಟೆ, ಆಕೆ ಧರಿಸಿದ್ದ ತಾಳಿ ಹಾಗೂ ಬೆನ್ನಿನ ಮೂಳೆಗಳು ಪೊಲೀಸರಿಗೆ ಲಭ್ಯವಾಗಿದೆ.
ಕಾಡು ಪ್ರಾಣಿಯೊಂದು ಮಹಿಳೆ ಚೋಂದುವನ್ನು ಹೊತ್ತೊಯ್ದು ತಿಂದು ಹಾಕಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ.
ಮಹಿಳೆಯನ್ನು ಸಮೀಪದ ಕಾಫಿ ತೋಟಕ್ಕೆ ಹೊತ್ತೊಯ್ದು ನಂತರ ಆಕೆಯ ಮಾಂಸವನ್ನು ತಿಂದು ಉಳಿಕೆಯ ಮೂಳೆಗಳನ್ನು ಬಿಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಘಟನೆ ಹಿನ್ನೆಲೆ
ಕಾರ್ಮಿಕ ಮಹಿಳೆ ಪರಿಶಿಷ್ಟ ಪಂಗಡದ ಚೋಂದು ಕಳೆದ ಒಂದು ತಿಂಗಳ ಹಿಂದೆ ಅಪ್ಪಿ ಎಂಬಾತನೊAದಿಗೆ ವಿವಾಹವಾಗಿದ್ದಳು.
ಕಾರ್ಮಿಕಳಾಗಿದ್ದ ಹಿನ್ನೆಲೆಯಲ್ಲಿ ಬೆಳ್ಳೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಕೆಲಸಕ್ಕೆ ಪತಿ, ಪತ್ನಿ ಸೇರಿಕೊಂಡಿದ್ದರು.
ದಿನನಿತ್ಯದ ಕೆಲಸ ಮುಗಿಸಿದ ದಂಪತಿ ತಾ. ೧೭ ರ ಸಂಜೆಯ ವೇಳೆ ತಾವು ವಾಸವಾಗಿದ್ದ ಮನೆಗೆ ಬಂದು ರಾತ್ರಿಗೆ ಬೇಕಾದ ಊಟ ತಯಾರಿಸುವ ಭರದಲ್ಲಿದ್ದರು.
ಇತ್ತ ಚೋಂದುವಿನ ಪತಿ ಅಪ್ಪಿ ಮನೆಯ ಕೋಣೆಯೊಂದರಲ್ಲಿ ವಿಶ್ರಾಂತಿ ಪಡೆಯುತ್ತಲೆ ನಿದ್ರೆಗೆ ಜಾರಿದ್ದಾನೆ.
ರಾತ್ರಿ ೮-೩೦ ರ ಸುಮಾರಿಗೆ ನಿದ್ರೆಯಿಂದ ಎಚ್ಚರಗೊಂಡು ನೋಡುವ ವೇಳೆ ಚೋಂದು ಮನೆಯಲ್ಲಿ ಇರಲಿಲ್ಲ.
ಗಾಬರಿಗೊಂಡ ಪತಿ ಅಪ್ಪಿ ಕತ್ತಲೆಯಲ್ಲಿಯೇ ಮನೆಯ ಸುತ್ತಲೂ ಹುಡುಕಾಟ ನಡೆಸಿದನಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಮುಂಜಾನೆಯ ವೇಳೆ ಚೋಂದುವಿನ ಸಹೋದರಿಗೆ ರಾತ್ರಿಯ ಘಟನೆ ಬಗ್ಗೆ ವಿಷಯ ತಿಳಿಸಿದ್ದಾನೆ.
ತಾ. ೧೮ ರಂದು ತನ್ನ ಅಕ್ಕ ಚೋಂದು ಕಾಣೆಯಾಗಿರುವ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ದಿನದಂದು ಮನೆಯ ಒಳಗೆ ಅಡುಗೆ ಕೆಲಸದಲ್ಲಿ ತಲ್ಲೀನಳಾಗಿದ್ದ ಚೋಂದು ಸಂಜೆ ೬ ರಿಂದ ೭ ಗಂಟೆಯ ಸುಮಾರಿಗೆ ಕಾರ್ಯನಿಮಿತ್ತ ಮನೆಯ ಹೊರಗೆ ಬಂದ ಸಮಯದಲ್ಲಿ ಆಕಸ್ಮಿಕವಾಗಿ ಕಾಡು ಪ್ರಾಣಿಯೊಂದು ಎದುರಾಗಿರಬಹುದು. ನಂತರ ಪ್ರಾಣಿಯು ದಿಢೀರನೆ ಈಕೆಯನ್ನು ಮನೆಯ ಅಂಗಳದಿAದ ಸಮೀಪದ ಕಾಫಿ ತೋಟಕ್ಕೆ ಹೊತ್ತೊಯ್ದಿರಬಹುದು ಎಂದು ಅಂದಾಜಿಸಲಾಗಿದೆ.
ಕಾಫಿ ತೋಟದಲ್ಲಿ ಸಿಕ್ಕಿರುವ ಮಹಿಳೆ ಚೋಂದುವಿನ ಕಾಲಿನಲ್ಲಿ ಕಾಡು ಪ್ರಾಣಿಯ ರೋಮಗಳು ಗೋಚರಿಸಿವೆ. ಇದರಿಂದಾಗಿ ಕಾಡು ಪ್ರಾಣಿಗೆ ಮಹಿಳೆ ಆಹಾರವಾಗಿರಬಹುದು ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಪೊಲೀಸರ ತನಿಖೆ ಮುಂದುವರಿಯುತ್ತಿದೆ. -ಹೆಚ್.ಕೆ.ಜಗದೀಶ್