*ಗೋಣಿಕೊಪ್ಪಲು / ಪೊನ್ನಂಪೇಟೆ, ಮೇ ೨೨ : ಪರಸ್ಪರ ಕೆಸರೆರಚಾಟದ ವಿಭಿನ್ನ ಅಚಾರಣೆಗಳೊಂದಿಗೆ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡುಹಬ್ಬ ಎರಡು ದಿನಗಳು ನೆರವೇರಿತು.
ಎರಡೂ ದಿನಗಳ ಹಬ್ಬದಲ್ಲಿ ಮೊದಲ ದಿನ ಗುಂಡಿಯತ್ ಅಯ್ಯಪ್ಪ ದೇವರ ‘ಅವುಲ್’ ವಿಶೇಷ ಪೂಜೆ, ಮನೆ ಮನೆಗೆ ವೇಷ ಧರಿಸಿ ಕಾಣಿಕೆ ಬೇಡುವುದು. ಭಾನುವಾರ ಭದ್ರಕಾಳಿ ಮತ್ತು ಗುಂಡಿಯತ್ ಅಯ್ಯಪ್ಪ ದೇವರ ಮೊಗ, ಕುದುರೆ, ಕೆಸರಿನ ಎರೆಚಾಟ ಮತ್ತು ಹರಕೆ, ಭಂಡಾರ ಒಪ್ಪಿಸುವ ಕಾರ್ಯಕ್ರಮದೊಂದಿಗೆ ಹಬ್ಬವನ್ನು ಆಚರಿಸಲಾಯಿತು.
ಊರು ತಕ್ಕರಾದ ಚಮ್ಮಟೀರ ಕುಟುಂಬದ ಮನೆಯಿಂದ ‘ಪೋಲವಂದೆರೆ’ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಊರಿನ ಮೂರು ನಿಗಧಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೋಲವಪ್ಪಂಡ ಕೋಟದಲ್ಲಿ ಊರಿನ ಜನರು, ಹೆಂಗಸರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು.
ಇದಕ್ಕೂ ಮುನ್ನ ಇಬ್ಬರು ಕೊಡವ ಪೂಜಾರಿಗಳು ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸಲಾಯಿತು.
ನಂತರ ಕೆರೆಯ ಹತ್ತಿರ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಇದನ್ನು ಕುಟ್ಟಿ ಅವಲಕ್ಕಿಯನ್ನು ಮಾಡಿ ದೇವರಿಗೆ ನೈವೇದ್ಯ ತಯಾರು ಮಾಡಲಾಯಿತು. ಈ ಇಬ್ಬರು ಪೂಜಾರಿಗಳು ಅವಲಕ್ಕಿಗೆ ಬಾಳೆಹಣ್ಣು ಸೇರಿಸಿ ನೈವೇದ್ಯ ಮಾಡಿದ ಪ್ರಸಾದವಾಗಿ ಭಕ್ತಾದಿಗಳಿಗೆ ನೀಡಿದರು.
ನಂತರ ಹೆಂಗಸರಿಗೆ ಪ್ರವೇಶ ನಿಷೇಧಿಸಲಾದ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿದರು. ದೇವಸ್ಥಾನದ ಸುತ್ತ ಶುಚಿಗೊಳಿಸಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ಈ ದೇವಸ್ಥಾನಕ್ಕೆ ಭಕ್ತರು ಕೂಡ ಅತ್ಯಂತ ಶುದ್ಧ ಮುದ್ರಿಕೆಯಲ್ಲಿ ಹೋಗಬೇಕಾಗಿದ್ದು, ಕೆಟ್ಟ ರೀತಿಯಿಂದ ನಡೆದುಕೊಂಡರೆ ಹೆಜ್ಜೇನು ಹಿಂಡು ದಾಳಿ ಮಾಡುತ್ತದೆ ಎಂಬ ಪ್ರತೀತಿ ಇದೆ.
ಇಲ್ಲಿ ವಿಶೇಷ ಪೂಜೆಯ ನಂತರ ಭಕ್ತರು ಈಡುಗಾಯಿಯನ್ನು ಒಡೆದರು. ತೆಂಗಿನ ಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ಉಪವಾಸವನ್ನು ಅಂತ್ಯಗೊಳಿಸಿದರು. ನಂತರ ಮೂಕಳೇರ ಬಲ್ಯಮನೆಯಲ್ಲಿ ಸಾಮೂಹಿಕ ಭೋಜನ ಮಾಡಿ ನಂತರ ಚಮ್ಮಟೀರ ಬಲ್ಯಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಮನೆ ಮನೆ ಹೊರಡುತ್ತಾರೆ. ಈ ಹಿಂದೆ ಊರಿನ ಮನೆಯನ್ನೆಲ್ಲಾ ಸುತ್ತುತ್ತಿದ್ದು, ಇದೀಗ ಚಮ್ಮಟೀರ ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಯಲ್ಲಿ ಈ ಕಳಿ ಹೊರಡುತ್ತದೆ.
ಎರಡನೇ ದಿನ ಮಧ್ಯಾಹ್ನ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊAದು ಕುದುರೆ ಹಾಗೂ ಮೊಗ ಹೊರಟು ಊರಿನ ಪ್ರಮುಖ ದೇವಾಲಯ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸೇರಿ ಎರಡು ಕಡೆಯಿಂದ ಕೃತಕವಾಗಿ ತಯಾರಿಸಿದ ತಲಾ ಒಂದೊAದು ಕುದುರೆ ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಆಲಂಗಿಸಿಕೊAಡು ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಕೆಸರು ಎರಚಾಡಿಕೊಳ್ಳುವುದು ಇಲ್ಲಿನ ವಿಶೇಷವಾಗಿದ್ದು ಹಿರಿಯರು ಕಿರಿಯರು ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿ ಆಲಂಗಿಸಿ ಕೊಳ್ಳುತ್ತಾರೆ. ಆದರೆ, ಇಲ್ಲಿ ಹೆಂಗಸರಿಗೆ ಹಾಗೂ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ ಎಂಬ ನಿಯಮ ಇದೆ.
ಆದರೆ, ಪರ ಊರಿನವರಿಗೆ ಹಾಗೂ ನೆಂಟರಿಗೆ ಮುಕ್ತವಾಗಿ ಇಲ್ಲಿ ಕುಣಿಯಲು ಅವಕಾಶವಿದೆ. ಅಂತಹವರಿಗೆ ಒಂದೊAದು ಬೆತ್ತದ ಕೋಲು ನೀಡುತ್ತಾರೆ. ಆ ಕೋಲು ಹಿಡಿದವರಿಗೆ ಕೆಸರು ಎರಚುವಂತಿಲ್ಲ.