ಮಡಿಕೇರಿ ಮೇ ೨೨ : ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಾಲನೆ ನೀಡಲಾಯಿತು.
ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ತಾ. ೨೨ ರಂದು ಆಚಾರ್ಯ ವರಣಂ, ಪುಣ್ಯಾಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು,
ಇಂದು ನಾಗದರ್ಶನ
ತಾ. ೨೩ ರಂದು (ಇಂದು) ಬೆಳಿಗ್ಗೆ ೬ ಗಂಟೆಯಿAದ ಮಹಾಗಣಪತಿ ಹೋಮ, ನವಕ ಪಂಚಗವ್ಯ, ಕಳಸ ಪೂಜೆ, ಕಳಶಾಭಿಷೇಕ, ಸರ್ವಾಲಂಕಾರ, ಮಹಾಪೂಜೆ ಹಾಗೂ ಪಾಷಾಣಮೂರ್ತಿ ದೈವದ ಕಳಸ ಪೂಜೆ, ಅಲಂಕಾರ ಪೂಜೆ ಮತ್ತು ಮಂಗಳಾರತಿ ನಡೆದು ಬೆಳಿಗ್ಗೆ ೮ ಗಂಟೆಗೆ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭೀಷೇಕ ನಡೆಯಲಿದ್ದು, ಪೂರ್ವಾಹ್ನ ೧೧ ಗಂಟೆಗೆ ನಾಗದರ್ಶನ, ಮಹಾ ಪೂಜೆ, ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ೧೨.೩೦ಕ್ಕೆ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಲಿದೆ. ಉಡುಪಿಯ ಪೆರ್ಲಂಪಾಡಿ ರಮಾನಂದ ಭಟ್ ನಾಗಪಾತ್ರಿಗಳಾಗಿ ನಾಗಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶನ ನಡೆಸಿಕೊಡಲಿದ್ದಾರೆ.