ಬಿಜೆಪಿ ಸರ್ಕಾರದ ಎಲ್ಲಾ ಹಗರಣಗಳ ಮರು ತನಿಖೆ; ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು, ಮೇ ೨೧: ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಕೇಳಿ ಬಂದಿದ್ದ ಎಲ್ಲಾ ಹಗರಣಗಳನ್ನು ಮರು ತನಿಖೆ ನಡೆಸಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ಭಾನುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾದ ಅವರು, ಬಿಜೆಪಿ ಸರ್ಕಾರದಲ್ಲಿ ಕೇಳಿಬಂದಿದ್ದ ಪಿಎಸ್‌ಐ ಹಗರಣ, ಗುತ್ತಿಗೆದಾರರ ಮೇಲೆ ಲಂಚದ ಒತ್ತಡ ಮುಂತಾದ ಹಲವಾರು ಆರೋಪಗಳನ್ನು ಮರು ತನಿಖೆ ನಡೆಸಲಾಗುವುದು ಎಂದು ಹೇಳಿದರು. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಹಳೆಯ ಪ್ರಕರÀಣಗಳ ತನಿಖೆ ನಡೆಸುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದರು. ಅದರಂತೆ ಬಿಜೆಪಿ ಸರ್ಕಾರದ ಎಲ್ಲಾ ಹಗರಣಗಳನ್ನು ಮರು ತನಿಖೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಳೆಯಿಂದ ಜಲಾವೃತಗೊಂಡ ಕೆ.ಆರ್. ಸರ್ಕಲ್: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಮಹಿಳೆ ಸಾವು

ಬೆಂಗಳೂರು, ಮೇ ೨೧: ಬೆಂಗಳೂರಿನಲ್ಲಿ ಮಳೆಯ ಪರಿಣಾಮ ಜಲಾವೃತಗೊಂಡ ಕೆ.ಆರ್. ವೃತ್ತದಲ್ಲಿನ ಅಂಡರ್ ಪಾಸ್‌ನಲ್ಲಿ ಸಿಲುಕಿ ತೀವ್ರ ಅಸ್ವಸ್ಥವಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಂಡರ್ ಪಾಸ್‌ನಲ್ಲಿ ಮುಳುಗಡೆಯಾಗಿದ್ದ ಕಾರಿನಲ್ಲಿ ನಾಲ್ವರನ್ನು ರಕ್ಷಣೆ ಮಾಡಲಾಗಿತ್ತು, ಘಟನೆಯಲ್ಲಿ ಮಗು ಕಾಣೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ನಡುವೆ ಅಸ್ವಸ್ಥಗೊಂಡಿದ್ದ ಮಹಿಳೆ ಭಾನುರೇಖಾ ಎಂಬಾಕೆ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇಂಟ್ ಮಾರ್ಥಾಸ್‌ಗೆ ಭೇಟಿ ನೀಡಿದ್ದು, ಮಹಿಳೆ ಕುಟುಂಬಕ್ಕೆ ೫ ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಮತ್ತೊಂದೆಡೆ ಮಳೆಯ ಅವಾಂತರಕ್ಕೆ ಚಿಕ್ಕಮಗಳೂರಿನ ಮೂಡಿಗೆರೆಯ ಚಿಕ್ಕಳ್ಳ ಬಳಿ ಓರ್ವ ಬೈಕ್ ಸವಾರ ಬೃಹತ್ ಮರ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನನ್ನ, ಸಿದ್ದರಾಮಯ್ಯ ಅವರ ಮನೆ ಸುತ್ತೋದು ಬಿಡಿ: ಡಿಕೆ. ಶಿವಕುಮಾರ್

ಬೆಂಗಳೂರು, ಮೇ ೨೧: ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ಪಕ್ಷ ಹೇಳಿದ್ದೇ ನಮಗೆ ವೇದ ವಾಕ್ಯ. ನನ್ನ ಮನೆ, ಸಿದ್ದರಾಮಯ್ಯ ಅವರ ಮನೆ ಎಂದು ಸುತ್ತಾಡೋದನ್ನು ಬಿಡಿ ಎಂದು ನಾಯಕರಿಗೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ತ್ಯಾಗವನ್ನು ನಾವು ನೆನಪಿಟ್ಟುಕೊಳ್ಳಬೇಕು, ಗಾಂಧಿ ಕುಟುಂಬದ ತ್ಯಾಗವನ್ನು ನಾವು ಯಾವತ್ತೂ ಮರೆಯುವ ಹಾಗಿಲ್ಲ. ಅಂತಹ ತ್ಯಾಗವನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ. ನನ್ನ ಮತ್ತು ಸಿದ್ದರಾಮಯ್ಯ ಅವರನ್ನು ಕೂರಿಸಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ನಮಗೆ ಖರ್ಗೆ ಮತ್ತು ಗಾಂಧಿ ಕುಟುಂಬದವರು ಏನು ಹೇಳಿದ್ದಾರೋ ಅದೇ ವೇದ ವಾಕ್ಯ. ಇಲ್ಲಿ ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ನಾವು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು. ವಿಧಾನಸಭೆ ಚುನಾವಣೆಯಲ್ಲಿ ನಮಗೆ ೧೩೫ ಸ್ಥಾನ ಬಂದಿರುವುದು ಸಂತಸ ತಂದಿಲ್ಲ. ನಾಯಕರು ನನ್ನ ಅಥವಾ ಸಿದ್ದರಾಮಯ್ಯ ಅವರ ಮನೆಗೆ ಬರಬೇಡಿ. ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ನಾವು ಉತ್ತಮವಾಗಿ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು. ನನ್ನ ಮನೆ, ಸಿದ್ದರಾಮಯ್ಯನವರ ಮನೆ ಎಂದು ಸುತ್ತಾಡೋದನ್ನು ಬಿಡಿ, ಇಲ್ಲಿ ಕೇಳಿದ್ದನ್ನು ಅಲ್ಲಿಗೆ, ಅಲ್ಲಿ ಕೇಳಿದ್ದನ್ನು ಇಲ್ಲಿ ಹೇಳುವುದನ್ನು ಬಿಡಿ. ಈ ಮೂಲಕ ಒಬ್ಬರ ವಿಷಯವನ್ನು ಇನ್ನೊಬ್ಬರ ಬಳಿ ಹೇಳಿ ಜಗಳಕ್ಕೆ ಕಾರಣವಾಗುವ ಚಾಳಿಯನ್ನು ಬಿಡಬೇಕು. ಪಕ್ಷ ಕಟ್ಟುವ ಕೆಲಸ ಮಾಡಬೇಕು. ತಾಳ್ಮೆಯಿಂದಿರಿ ಎಲ್ಲರಿಗೂ ಅಧಿಕಾರ ಸಿಗುತ್ತದೆ ಎಂದು ಹೇಳಿದರು.

ಭಯೋತ್ಪಾದನೆಯಿಂದ ಬಿಜೆಪಿಯ ಯಾವುದೇ ನಾಯಕರೂ ಪ್ರಾಣ ಕಳೆದುಕೊಂಡಿಲ್ಲ: ಸಿಎಂ

ಬೆAಗಳೂರು, ಮೇ ೨೧: ಕಾಂಗ್ರೆಸ್ ಭಯೋತ್ಪಾದನಗೆ ಬೆಂಬಲ ನೀಡುತ್ತದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಬಿಜೆಪಿಯ ಯಾವುದೇ ನಾಯಕರೂ ಭಯೋತ್ಪಾದನೆಯಿಂದ ಪ್ರಾಣ ಕಳೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ೩೨ನೇ ಪುಣ್ಯತಿಥಿ ಅಂಗವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದರು. ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಾರೆ. ಆದರೆ, ಬಿಜೆಪಿಯ ಯಾವುದೇ ನಾಯಕರೂ ಭಯೋತ್ಪಾದನೆಯಿಂದ ಪ್ರಾಣ ಕಳೆದುಕೊಂಡಿಲ್ಲ. ನಾವು ಭಯೋತ್ಪಾದನೆಯನ್ನು ಬೆಂಬಲಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಇಂದಿರಾಗಾAಧಿ ಮತ್ತು ರಾಜೀವ್ ಗಾಂಧಿ ಅವರಂತಹ ಅನೇಕ ಕಾಂಗ್ರೆಸ್ ನಾಯಕರು ಭಯೋತ್ಪಾದಕ ದಾಳಿಯಲ್ಲಿ ಮಡಿದಿದ್ದಾರೆ. ಬ್ರಿಟಿಷರನ್ನು ಓಡಿಸಿ ಸ್ವತಂತ್ರ ಕೊಡಿಸಿದ್ದು ಕಾಂಗ್ರೆಸ್ ಪಕ್ಷವಾಗಿದೆ ಎಂದರು.

ಯುವಕನ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ, ಮೇ ೨೧: ಮಾರಿಹಾಳ ಸರ್ಕಾರಿ ಶಾಲೆ ಆವರಣದಲ್ಲಿ ಯುವಕನೊಬ್ಬನ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಮಾರಿಹಾಳ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ತಾಲೂಕಿನ ಸುಳೇಭಾವಿ ನಿವಾಸಿ ಅಕ್ಷಯ ಕುಮಾರ್ ಕೊಣಕೇರಿ (೨೩), ಮಾರಿಹಾಳ ನಿವಾಸಿ ರಾಜೇಸಾಬ್ ಮುಲ್ಲಾ (೨೩) ಬಂಧಿತ ಆರೋಪಿಗಳಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಮಾರಿಹಾಳ ಸರ್ಕಾರಿ ಶಾಲೆಯ ಕೊಠಡಿ ಎದುರು ಮಹಾಂತೇಶ ಕರಲಿಂಗಣ್ಣವರ್ (೨೪) ಎಂಬಾತನ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮಾರಿಹಾಳ ಪೊಲೀಸರು ತನಿಖೆ ಕೈಗೊಂಡಿದ್ದರು. ನಾಲ್ಕು ದಿನಗಳ ಹಿಂದೆ ಕೊಲೆಯಾದ ಮಹಾಂತೇಶ ಹಾಗೂ ಆರೋಪಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವೇಳೆ ಮಹಾಂತೇಶ್ ರಾಜೇಸಾಬ್‌ಗೆ ಧಮ್ಕಿ ಹಾಕಿದ್ದ. ಇದೇ ವೈಷಮ್ಯವಿಟ್ಟುಕೊಂಡು ಇಬ್ಬರು ಆರೋಪಿಗಳು ಮಹಾಂತೇಶ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಾ. ೧೮ ರ ರಾತ್ರಿ ಶಾಲಾ ಕೊಠಡಿ ಎದುರು ಕುಳಿತಿದ್ದ ಮಹಾಂತೇಶ್‌ನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಶವವಾಗಿ ಪತ್ತೆ

ಹಾವೇರಿ, ಮೇ ೨೧: ರಾಣೆಬೆನ್ನೂರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಶವವಾಗಿ ಪತ್ತೆಯಾಗಿದೆ. ಬಾಯಿ ನೋವಿನಿಂದ ಬಳಲುತ್ತಿದ್ದ ಚಿರತೆಯು ಆಹಾರವಿಲ್ಲದೆ ನಿತ್ರಾಣಗೊಂಡಿದ್ದರಿAದ ಸುಲಭವಾಗಿ ಬೇಟೆಗೆ ಸಿಗುವಂತ ಮನುಷ್ಯರ ಮೇಲೆ ದಾಳಿ ಮಾಡುತ್ತದೆ. ಅದರಂತೆ ಇಂದು ಬೆಳಿಗ್ಗೆ ಮಹಿಳೆ ಮೇಲೆ ದಾಳಿ ಮಾಡಿತ್ತು. ಇಂದು ಬೆಳಿಗ್ಗೆ ೫೫ ವರ್ಷದ ಸಿದ್ದಮ್ಮ ಬಣಗಾರ ಎಂಬುವರು ತೋಟಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ಮಾಡಿತ್ತು. ಚಿರತೆ ದಾಳಿಯಿಂದ ಹೆದರಿದ ಸಿದ್ದಮ್ಮ ಜೋರಾಗಿ ಕೂಗಿಕೊಂಡಿದ್ದರು. ಈ ವೇಳೆ ಗ್ರಾಮಸ್ಥರು ಬಂದು ಚಿರತೆಯನ್ನು ಓಡಿಸಿದ್ದರು. ಚಿರತೆ ದಾಳಿಗೆ ಒಳಗಾಗಿದ್ದ ಸಿದ್ದಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅಲ್ಲಿಂದ ಅಡಕೆ ತೋಟಕ್ಕೆ ನುಗ್ಗಿದ್ದ ಚಿರತೆ ಮೃತದೇಹ ಒಂದು ಗಂಟೆ ಬಳಿಕ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆಯು ಬಾಯಿಗೆ ಗಾಯವಾಗಿದ್ದು ನೋವಿನಿಂದ ಬಳಲಿ, ಆಹಾರವಿಲ್ಲದೆ ನಿತ್ರಾಣಗೊಂಡು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.