ಮಡಿಕೇರಿ, ಮೇ ೨೦: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಡಿಕೇರಿ ನಗರದ ಇಂದಿರಾಗಾAಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿ ಸಂತಸ ಹಂಚಿಕೊAಡರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಕಾಂಗ್ರೆಸ್ ವಕ್ತಾರ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರು ಇಂದಿನ ಸಂಭ್ರಮ ಕಾಂಗ್ರೆಸ್ ಪಕ್ಷದ ಸಂಭ್ರಮವಾಗಿರದೆ ಬಿಜೆಪಿ ಕರಾಳ ಆಡಳಿತದ ಕಾರ್ಮೋಡ ಮರೆಯಾಗಿದ್ದು ಕರ್ನಾಟಕದ ಏಳು ಕೋಟಿ ನಾಗರಿಕರ ಸಂಭ್ರಮವಾಗಿದೆ ಎಂದು ಬಣ್ಣಿಸಿದರು. ಕಳೆದ ಎರಡು ದಶಕಗಳಿಂದ ಸರ್ವಾಧಿಕಾರದ ಬಲೆಯಲ್ಲಿ ಸಿಲುಕಿ ನಲುಗಿ ಹೋಗಿದ್ದ ಪೂರ್ಣ ಕೊಡಗಿನ ಜನತೆಯು ಸರ್ವಾಧಿಕಾರ ಆಡಳಿತದಿಂದ ಬಿಡುಗಡೆ ಹೊಂದಿದ ದಿನವಾಗಿದ್ದು ಅದಕ್ಕಾಗಿ ಸಂಭ್ರಮಿಸುತ್ತಿದ್ದೇವೆ ಎಂದು ವಿವರಿಸಿದರು. ಡಿ.ಸಿ.ಸಿ. ಸದಸ್ಯ ಅಬ್ದುಲ್ ರಜಾಕ್, ಮಾಜಿ ಮೂಡ ಅಧ್ಯಕ್ಷ ಚುಮ್ಮಿ ದೇವಯ್ಯ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಬಾನಂಡ ಪ್ರಥ್ಯು, ಡಿ.ಸಿ.ಸಿ. ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ಪ್ರಮುಖರಾದ ಅಯಿಲಪಂಡ ಪುಷ್ಪ ಪೂಣಚ್ಚ, ಪ್ರಕಾಶ್ ಆಚಾರ್ಯ, ಕೆ.ಜೆ. ಪೀಟರ್, ಯಾಕೂಬ್, ಪ್ರಭು ರೈ, ಕಲೀಲ್ ಬಾಷ, ಹಫೀಸ್, ಮಾಜಿ ನಗರಸಭೆ ಅಧ್ಯಕ್ಷೆ ಜುಲೇಕಾಬಿ, ಮಿನಾಜ್ ಪ್ರವೀಣ್, ಚಂದ್ರಶೇಖರ್, ವಸಂತ್ ಭಟ್, ಮುಂಡAಡ ಸುನಿಲ್, ನಾಗೇಶ್, ರಿಯಾಜ್ ಸೇರಿದಂತೆ ಅನೇಕ ಕಾರ್ಯಕರ್ತರು ಸಂಭ್ರಮದಲ್ಲಿ ಭಾಗವಹಿಸಿದ್ದರು.
ಸೋಮವಾರಪೇಟೆ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆ ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಸೋಮವಾರಪೇಟೆ ಬ್ಲಾಕ್ ಹಾಗೂ ನಗರ ಕಾಂಗ್ರೆಸ್ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ನಡೆಯಿತು. ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಪಕ್ಷ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಗಳಿಗೆ ಜೈಕಾರ ಮೊಳಗಿಸಿದರು.
ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕಾಂಗ್ರೆಸ್ ಪಕ್ಷದ ಮೇಲೆ ಜನತೆ ವಿಶ್ವಾಸವಿಟ್ಟು ಅಧಿಕಾರಕ್ಕೆ ತಂದಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರುಗಳು ಸಮರ್ಥವಾಗಿ ಆಡಳಿತ ನಡೆಸಲಿದ್ದಾರೆ. ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಲಾಗುವುದು ಎಂದರು.
ಕೊಡಗಿನಲ್ಲಿ ಅಭಿವೃದ್ಧಿಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲಿದ್ದ ಗ್ರಹಣ ಬಿಟ್ಟಿದೆ. ಯುವ ನಾಯಕತ್ವದಲ್ಲಿ ಪಕ್ಷವು ಇನ್ನಷ್ಟು ಶಕ್ತಿಯುತವಾಗಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಿದೆ ಎಂದು ಅಭಿಪ್ರಾಯಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ನಾಗರಾಜು, ಹಿರಿಯ ಮುಖಂಡರಾದ ಹೆಚ್.ಸಿ. ನಾಗೇಶ್, ಈಶ್ವರಚಂದ್ರ ಸಾಗರ್ ಅವರುಗಳು ಮಾತನಾಡಿದರು. ಕಾಂಗ್ರೆಸ್ ಒಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಜಿ. ಇಂದ್ರೇಶ್, ಚೇತನ್, ವಿನೋದ್, ಗಿರೀಶ್, ಮೀನಾಕುಮಾರಿ, ಕಿಬ್ಬೆಟ್ಟ ಧರ್ಮ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.