ಬೆಂಗಳೂರು, ಮೇ ೨೦: ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಪ್ರಮಾಣವಚನ ಸ್ವೀಕಾರದ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಹೆಚ್ಚಿನ ವಿವರಗಳು ಹಾಗೂ ಗ್ಯಾರಂಟಿಗಳಿಗೆ ಇರುವ ಷರತ್ತುಗಳು ಮತ್ತು ನಿಯಮಗಳನ್ನು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡು ನಂತರ ಜಾರಿಗೆ ತರಲಾಗುವುದು ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ ೨೦೦ ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷಿö್ಮÃ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳು ೨೦೦೦ ರೂಪಾಯಿ ನೀಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ೧೦ ಕೆ.ಜಿ ಅಕ್ಕಿ, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಯುವನಿಧಿ ಕಾರ್ಯಕ್ರಮದಡಿ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳಿಗೆ ೩೦೦೦ ರೂಪಾಯಿ, ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ ೧೫೦೦ ರೂ. ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಸುದ್ದಿಗೋಷ್ಠಿ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್‌ನ ಗ್ಯಾರಂಟಿಗಳ ವಿರುದ್ಧ ಕಿಡಿಕಾರಿದ್ದರು. ಈ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇ ಆದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ ರಾಜ್ಯದಲ್ಲಿ ಯಾವುದೇ ಆರ್ಥಿಕ ದಿವಾಳಿ ಆಗದಂತೆ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಸಿದ್ದರಾಮಯ್ಯ ನುಡಿದರು.
ಐದು ಗ್ಯಾರಂಟಿಗಳಿಗೆ ಸುಮಾರು ೫೦ ಸಾವಿರ ಕೋಟಿ ವೆಚ್ಚವಾಗ ಬಹುದು. ಕಟ್ಟುನಿಟ್ಟಾದ ತೆರಿಗೆ ಸಂಗ್ರಹ ಮೂಲಕ ನಾವು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ಕೊಳ್ಳುತ್ತೇವೆ. ಕರ್ನಾಟಕದಿಂದ ೪ ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ನಮ್ಮ ರಾಜ್ಯದ ಬಜೆಟ್ ಗಾತ್ರ ೩ ಲಕ್ಷದ ೧೦ ಸಾವಿರ ಕೋಟಿ ರೂ. ಇದೆ. ಕೇಂದ್ರ ಸರ್ಕಾರÀದಿಂದ ಸಿಗಬೇಕಾದ ಪಾಲುಹಣ ನ್ಯಾಯಯುತವಾಗಿ ಸಿಗುತ್ತಿಲ್ಲ. ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಕೌನ್ಸಿಲ್ ಸದಸ್ಯರಾಗಿದ್ದ ಸಂದರ್ಭ ರಾಜ್ಯಕ್ಕೆ ಬರಬೇಕಿದ್ದ ಜಿಎಸ್‌ಟಿ ಪಾಲು ಹಣವನ್ನು ಪಡೆಯುವಲ್ಲಿ ವಿಫಲ ರಾಗಿದ್ದರು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಸಿದ್ದರಾಮಯ್ಯ ದೂರಿದರು. ಈ ಹಿಂದೆ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರು ಅಧಿಕಾರ ಬಿಡುವ ವೇಳೆ ದೇಶದ ಮೇಲೆ ೫೩ ಲಕ್ಷದ ೧೧ ಸಾವಿರ ಕೋಟಿ ಸಾಲವಿತ್ತು. ಪ್ರಸ್ತುತ ಅದು ೧೫೫ ಲಕ್ಷ ಕೋಟಿಗೆ ಏರಿಕೆಯಾಗಿದೆ. ರಾಜ್ಯದಲ್ಲೂ ಬಿಜೆಪಿ ಜೆಡಿಎಸ್ ಅಧಿಕಾರವಧಿಯಲ್ಲಿ ಸಾಲದ ಹೊರೆ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿದ್ದರೂ ಇವೆಲ್ಲವನ್ನು ಸರಿದೂಗಿಸಿ ಕೊಂಡು ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ಆ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಇಂದಿರಾ ಕ್ಯಾಂಟಿನ್ ಅನ್ನು ಪುನರಾರಂಭ ಮಾಡ ಲಾಗುವುದು ಎಂದು ತಿಳಿಸಿದರು.
(ಮೊದಲ ಪುಟದಿಂದ)
ಸೋಮವಾರದಿAದ ವಿಶೇಷ ಅಧಿವೇಶನ
ಸೋಮವಾರದಿಂದ ೩ ದಿನಗಳ ವಿಶೇಷ ಅಧಿವೇಶನ ನಡೆಸುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಪ್ರಮಾಣ ವಚನ ಭೋದಿಸಬೇಕಿರುವ ಕಾರಣ ಸೋಮವಾರದಿಂದ ೩ ದಿನಗಳ ವಿಶೇಷ ಅಧಿವೇಶನ ನಡೆಸಲಾಗುತ್ತದೆ. ಹಂಗಾಮಿ ಸ್ಪೀಕರ್ ಆಗಿ ಆರ್.ವಿ ದೇಶಪಾಂಡೆ ನೇಮಕಗೊಳ್ಳಲಿದ್ದಾರೆ. ಬಳಿಕ ನೂತನ ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು.