ಕೂಡಿಗೆ, ಮೇ ೨೦: ಸಕಲೇಶಪುರ ವ್ಯಾಪ್ತಿಯಲ್ಲಿ ಪುಂಡಾಟ ಮಾಡುತ್ತಿದ್ದ ಪುಂಡಾನೆಯನ್ನು ಒಂದು ವರ್ಷದ ಹಿಂದೆ ಅರಣ್ಯ ಇಲಾಖೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರದ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿತ್ತು. ಆದರೆ ಆ ಪುಂಡಾನೆಯು ಅಲ್ಲಿಂದ ಕಳೆದ ನಾಲ್ಕು ತಿಂಗಳ ಹಿಂದೆ ಮರಳಿ ಬಂದು ಸಕಲೇಶಪುರದ ಕಾಡನ್ನು ಸೇರಿ ತನ್ನ ಪುಂಡಾಟವನ್ನು ಮುಂದುವರೆಸಿತ್ತು.

ಸಕಲೇಶಪುರ ತಾಲೂಕು ವ್ಯಾಪ್ತಿಯ ಹರಹಳ್ಳಿ ಗ್ರಾಮ ವ್ಯಾಪ್ತಿಗೆ ತಲುಪಿ ಕಾಡಿನಂಚಿನ ಮನೆಯಲ್ಲಿ ಸಂಗ್ರಹಿಸಿದ್ದ ಭತ್ತ ಮತ್ತು ಅಕ್ಕಿ ಇತರೆ ಪದಾರ್ಥಗಳನ್ನು ತಿನ್ನುತ್ತಾ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿತ್ತು. ಈ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆಯವರು ರಾಜ್ಯಮಟ್ಟದಿಂದ ಅನುಮತಿ ಪಡೆದು ಕೊಡಗಿನ ಸಾಕಾನೆಗಳ ಸಹಕಾರದೊಂದಿಗೆ ಎರಡನೆ ಬಾರಿಗೆ ಆ ಕಾಡಾನೆಯನ್ನು ಸೆರೆ ಹಿಡಿದಿದ್ದಾರೆ.

ಕಾಡಾನೆಗಳನ್ನು ಹಿಡಿಯಲು ಬಳಸುವ ಅರವಳಿಕೆ ಮದ್ದನ್ನು ಬಳಕೆ ಮಾಡಿದ್ದರಿಂದಾಗಿ ಆ ಕಾಡಾನೆಯು ಹರಹಳ್ಳಿಯ ರಸ್ತೆಯ ಬದಿಯಲ್ಲಿ ನಿಂತಿದ್ದು, ಅರಣ್ಯ ಇಲಾಖೆ ಸಾಕಾನೆಗಳಾದ ವಿಕ್ರಮ, ಧನಂಜಯ, ಅಭಿಮನ್ಯು, ಮಹೇಂದ್ರ, ಅಜ್ಜಯ್ಯ ಇವುಗಳನ್ನು ಬಳಸಿಕೊಂಡು ಆನೆಯ ವೈದ್ಯರಾದ ಡಾ, ಮುಜೀಬ್, ಹಾಗೂ ಡಾ, ರಮೇಶ್ ತಂಡದ ನೆರವಿನೊಂದಿಗೆ ಸೆರೆಹಿಡಿದು, ಲಾರಿಯ ಮೂಲಕ ದುಬಾರೆ ಸಾಕಾನೆ ಶಿಬಿರಕ್ಕೆ ತಂದು ಪಳಗಿಸಲಾಗುತ್ತದೆ.

ರಾಜ್ಯ ಅರಣ್ಯ ಇಲಾಖೆಯ ಸೂಚನೆಯಂತೆ ಜಿಲ್ಲಾ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ ಮತ್ತು ದುಬಾರೆ ಉಪ ವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ನೇತೃತ್ವದಲ್ಲಿ ಪುಂಡಾನೆಯನ್ನು ಪಳಗಿಸುವ ಕಾರ್ಯ ನಡೆಯುತ್ತಿದೆ.

-ಕೆ.ಕೆ. ನಾಗರಾಜಶೆಟ್ಟಿ.