ನವದೆಹಲಿ, ಮೇ ೧೯: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರೂ. ೨ ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ತಾ. ೨೩ ರಿಂದ ಸೆಪ್ಟೆಂಬರ್ ೩೦ ರವರೆಗೆ ೨,೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ಕಾನೂನುಬದ್ಧವಾಗಿ ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್ಬಿಐ ಹೇಳಿದೆ. ಅಲ್ಲದೆ ೨೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ಗ್ರಾಹಕರಿಗೆ ವಿತರಿಸದಂತೆ ದೇಶದ ಎಲ್ಲಾ ಬ್ಯಾಂಕ್ಗಳಿಗೆ ಸೂಚಿಸಿದೆ. ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ ಎಂದಿರುವ ಆರ್ಬಿಐ, ೨೦೦೦ ರೂಪಾಯಿ ನೋಟ್ಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿದೆ ಮತ್ತು ಒಂದು ಬಾರಿಗೆ ೨೦ ಸಾವಿರ ರೂಪಾಯಿವರೆಗೆ ವಿನಿಮಯ ಮಾಡಿಕೊಳ್ಳಲು ಅಥವಾ ಜಮೆ ಮಾಡಲು ಅವಕಾಶ ನೀಡಿದೆ. ನವೆಂಬರ್ ೮, ೨೦೧೬ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ೫೦೦ ಮತ್ತು ೧,೦೦೦ ರೂಪಾಯಿ
ರೂ. ೨,೦೦೦ ನೋಟ್ ಹಿಂಪಡೆದ ಆರ್ಬಿಐ
(ಮೊದಲ ಪುಟದಿಂದ) ನೋಟ್ ಬ್ಯಾನ್ ಮಾಡುವುದಾಗಿ ಘೋಷಿಸಿದ್ದರು. ಹಳೆ ನೋಟುಗಳನ್ನು ಬದಲಿಸಲು ಆರ್ಬಿಐ ಹೊಸ ೫೦೦ ರ ನೋಟು ಮತ್ತು ೨,೦೦೦ ರೂಪಾಯಿ ನೋಟುಗಳನ್ನು ಪರಿಚಯಿಸಿತ್ತು. ಪ್ರಸ್ತುತ, ಆರ್ಬಿಐ ರೂ. ೨, ರೂ. ೫, ರೂ. ೧೦, ರೂ. ೨೦, ರೂ. ೫೦, ರೂ. ೧೦೦, ರೂ. ೨೦೦ ಮತ್ತು ರೂ. ೫೦೦ ಮತ್ತು ನೋಟುಗಳನ್ನು ಪೂರೈಸುತ್ತಿದೆ. ಆದರೆ ಆರ್ಬಿಐ ರೂ. ೨೦೦೦ ಮುಖಬೆಲೆಯ ನೋಟುಗಳ ಮುದ್ರಣವನ್ನು ನಾಲ್ಕು ವರ್ಷಗಳ ಹಿಂದೆಯೇ ನಿಲ್ಲಿಸಿದೆ.