ಗೋಣಿಕೊಪ್ಪಲು, ಮೇ ೧೯: ಗಂಡ ಹೆಂಡತಿಯ ನಡುವೆ ಜಗಳವಾಗುತ್ತಿದ್ದ ಸಂದರ್ಭ ಮನೆಯ ಸಮೀಪವಿದ್ದ ಮತ್ತೋರ್ವ ವ್ಯಕ್ತಿ ಸ್ಥಳಕ್ಕೆ ತೆರಳಿ ಆಕ್ರೋಶಗೊಂಡು ಮಹಿಳೆಯ ಮೇಲೆ ಕತ್ತಿಯಿಂದ ಪ್ರಹಾರ ನಡೆಸಿ ಹತ್ಯೆಗೈದ ಘಟನೆ ದ.ಕೊಡಗಿನ ಕುಂದ ಸಮೀಪದ ಮುಗುಟಗೇರಿಯಲ್ಲಿ ನಡೆದಿದೆ.

ಮೃತಪಟ್ಟ ಕಾರ್ಮಿಕ ಮಹಿಳೆಯನ್ನು ಮೊಣ್ಣಿ (೩೨) ಎಂದು ಗುರುತಿಸಲಾಗಿದ್ದು ಆರೋಪಿ ಶ್ರೀನಿವಾಸನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ರಾತ್ರಿ ಮೊಣ್ಣಿ ಹಾಗೂ ಆಕೆಯ ಗಂಡ ಅಪ್ಪು ಊಟ ಮುಗಿಸಿದ್ದರು. ಎಂದಿನAತೆ ಮಾತಿನಲ್ಲಿ ತೊಡಗಿದ್ದ ವೇಳೆ ಇವರಿಬ್ಬರ ನಡುವೆ ಜಗಳವಾಗಿದೆ. ಜಗಳವು ತಾರಕಕ್ಕೆ ಏರುತ್ತಿದ್ದಂತೆಯೇ ಸಮೀಪದ ಮನೆಯಲ್ಲಿದ್ದ ಶ್ರೀನಿವಾಸ ಎಂಬಾತ ಮೊಣ್ಣಿ ಮನೆಯ ಬಳಿ ಬಂದು ಇವರಿಬ್ಬರ ನಡುವಿನ ಜಗಳದ ಬಗ್ಗೆ ಪ್ರಶ್ನಿಸಿದ್ದಾನೆ. ಈ ವೇಳೆ ಮೊಣ್ಣಿ ಶ್ರೀನಿವಾಸನ ಮಾತಿಗೆ ಉತ್ತರ ನೀಡುತ್ತಿದ್ದಂತೆಯೇ ಆಕ್ರೋಶಗೊಂಡ ಶ್ರೀನಿವಾಸ ತನ್ನ ಕೈಯಲ್ಲಿದ್ದ ಕತ್ತಿಯಿಂದ ಮೊಣ್ಣಿಯ ಕುತ್ತಿಗೆ ಭಾಗಕ್ಕೆ ಬೀಸಿದ್ದಾನೆ. ಇದರಿಂದ ಮೊಣ್ಣಿಯು ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ.

ಕಾರ್ಯನಿಮಿತ್ತ ಗೋಣಿಕೊಪ್ಪ ಠಾಣಾಧಿಕಾರಿ ಸಿದ್ದರಾಜು ಹಾಗೂ ಸಿಬ್ಬಂದಿಗಳು ಕುಂದ ಭಾಗಕ್ಕೆ ತೆರಳುತ್ತಿದ್ದ ವೇಳೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿದಾಗ ಆರೋಪಿಯು ಸ್ಥಳದಲ್ಲಿಯೇ ಇರುವುದನ್ನು ಖಚಿತ ಪಡಿಸಿಕೊಂಡು ವಶಕ್ಕೆ ಪಡೆಯುವಲ್ಲಿ ಯಶಸ್ವಿ ಯಾಗಿದ್ದಾರೆ. ಗಂಡ ಹೆಂಡತಿಯ ನಡುವೆ ನಡೆದ ಗಲಾಟೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿ ಮಹಿಳೆಯನ್ನು ಹತ್ಯೆಗೈದ ಪಕ್ಕದ ಮನೆಯ ಶ್ರೀನಿವಾಸ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ವೀರಾಜಪೇಟೆ ಡಿವೈಎಸ್ಪಿ ಮೋಹನ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ವಸಂತ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ಹೆಚ್.ಕೆ. ಜಗದೀಶ್