ಶನಿವಾರಸಂತೆ, ಮೇ ೧೮: ಪಟ್ಟಣದ ತ್ಯಾಗರಾಜ ಕಾಲೋನಿಯ ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ವಿಜಯ ವಿನಾಯಕ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ನೂತನ ನಾಗದೇವರ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಿಗ್ಗೆ ಗಂಗಾ ಪೂಜೆ ಮಾಡಿ ಮಹಿಳೆಯರು ಕಳಸ ಹೊತ್ತು ಮಂಗಳ ವಾದ್ಯದೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಪ್ರಾರ್ಥನೆ, ಕಲಶ ಪೂಜೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ ನಡೆಯಿತು.
ನಂತರ ದೇವಸ್ಥಾನದ ಪ್ರಾಂಗಣದಲ್ಲಿ ನಾಗದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಶ್ರೀ ವಿಜಯ ವಿನಾಯಕ ಸ್ವಾಮಿಗೆ ೧೦೮ ಸೀಯಾಳ ಅಭಿಷೇಕ, ಮಹಾಪೂಜೆ ನೆರವೇರಿತು. ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸಂಜೆ ವಿಜಯ ವಿನಾಯಕ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ದೇವಾಲಯದಿಂದ ಬೀರಲಿಂಗೇಶ್ವರ ದೇವಾಲಯದವರೆಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿ ರಂಗ ಪೂಜೆ ನಡೆಯಿತು.
ಪೂಜಾ ಕೈಂಕರ್ಯಗಳು ದೇವಸ್ಥಾನದ ಅರ್ಚಕ ಮಂಜುನಾಥ ಶರ್ಮ ಹಾಗೂ ಹಾಸನದ ಪ್ರಸನ್ನ ಕುಮಾರ ಜೋಯಿಷಿ ಅವರ ನೇತೃತ್ವದಲ್ಲಿ ನೆರವೇದವು. ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್. ಮಧು, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.