(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಮೇ ೧೯: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ದಶಕಗಳ ಬಳಿಕ ಗೆದ್ದು ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದೆ. ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಮತದಾರರು ಮತ ವಿಭಜನೆಯಾಗದಂತೆ ಎಚ್ಚರಿಕೆ ಮೆರೆದಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕಳೆದ ಮೂರು ಚುನಾವಣೆಗಳಲ್ಲಿ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಕೂಡ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುತ್ತಿತ್ತು. ಈ ಲಾಭವನ್ನು ಪಡೆದು ಬಿಜೆಪಿ ಸುಲಭದಲ್ಲಿ ಗೆಲುವು ಪಡೆಯುತ್ತಿತ್ತು. ೨೦೧೩ ರಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಿರುವ ಬೂತ್ ಗಳಲ್ಲಿ ಬಿಜೆಪಿ ಪರವಾಗಿ ಮತಗಳು ಚಲಾವಣೆಯಾಗಿತ್ತು. ಇದರಿಂದ ದಿವಂಗತ ಬಿ.ಟಿ ಪ್ರದೀಪ್ ಅವರು ಸಹ ಅಲ್ಪಮತಗಳ ಅಂತರದಿAದ ಸೋಲು ಕಂಡಿದ್ದರು. ೨೦೧೩ ಹಾಗೂ ೧೮ ರಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳು ವಿಭಜನೆಯಾಗಿ, ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಬಿ.ಎ ಜೀವಿಜಯ ಅವರು ಸೋಲು ಕಂಡಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಎಸ್.ಡಿ.ಪಿ.ಐ ಹಾಗೂ ಜೆಡಿಎಸ್ ಪರವಾಗಿ ಚಲಾವಣೆಗೊಂಡು ಮತ ವಿಭಜನೆಯಿಂದ ಗೆಲುವು ಪಡೆಯಬಹುದೆಂಬ ವಿಶ್ವಾಸದಲ್ಲಿದ್ದ ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಎಸ್.ಡಿ.ಪಿ.ಐ ಅಭ್ಯರ್ಥಿ ಮಡಿಕೇರಿ ಕ್ಷೇತ್ರದಲ್ಲಿ ೩ ರಿಂದ ೪ ಸಾವಿರ ಮತಗಳನ್ನು ಪಡೆಯಬಹುದೆಂದು ಅಂದಾಜಿಸಲಾಗಿತ್ತು.

ಎಸ್.ಡಿ.ಪಿ.ಐ ೪ ಸಾವಿರ ಮತಗಳನ್ನು ಪಡೆದರೆ ಬಿಜೆಪಿ ಸುಲಭದಲ್ಲಿ ಗೆಲುವು ಪಡೆಯಬಹುದು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಎಸ್.ಡಿ.ಪಿ.ಐ ಕಾರ್ಯಕರ್ತರೇ ಈ ಭಾರಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ. ಎಸ್.ಡಿ.ಪಿ.ಐ ಕೇವಲ ೧೪೧೫ ಮತಗಳು ಮಾತ್ರ ಪಡೆದಿದೆ. ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಶೇಕಡಾ ೯೬% ರಷ್ಟು ಅಲ್ಪಸಂಖ್ಯಾತರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿರುವದು ಸ್ಪಷ್ಟವಾದಂತಿದೆ.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಾಣ್ಮೆಯ ನಡೆ

ಮಡಿಕೇರಿ ಕ್ಷೇತ್ರದಲ್ಲಿ ಪ್ರಬಲವಾಗಿದ್ದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪನವರು ೭ ಸಾವಿರ ಅಲ್ಪಸಂಖ್ಯಾತ ಮುಸ್ಲಿಂ ಮತಗಳು ಪಡೆಯುವ ನಿರೀಕ್ಷೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ತಟಸ್ಥವಾಗಿದ್ದರು. ಇದರಿಂದ ಇಡೀ ಜೆಡಿಎಸ್ ಗೊಂದಲಕ್ಕೆ ಸಿಲುಕಿತ್ತು. ಅಲ್ಪಸಂಖ್ಯಾತ ಮತಗಳು ವಿಭಜನೆಯಾಗದಂತೆ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು ಅವರು ರಾತ್ರೋ ರಾತ್ರಿ ಜೆಡಿಎಸ್ ಅಲ್ಪಸಂಖ್ಯಾತ ಕಾರ್ಯಕರ್ತರು ಪ್ರಬಲವಾಗಿರುವ ಬೂತ್ ಗಳಿಗೆ ಫೋನ್ ಮಾಡಿ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರಿಗೆ ಮತ ಚಲಾಯಿಸುವಂತೆ ಕರೆ ನೀಡಿದ್ದರು ಎನ್ನಲಾಗುತ್ತಿದೆ. ಕಳೆದ ಎರಡು ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಪಡೆಯುತ್ತಿದ್ದ ಬೂತ್‌ಗಳಲ್ಲಿ ಕಾಂಗ್ರೆಸ್ ಪರವಾಗಿ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಮತ ಚಲಾವಣೆಯಾಗಿದೆ.

ವೀರಾಜಪೇಟೆಯಲ್ಲಿ ಪ್ರಚಾರದಲ್ಲಿ ಕಾಣಿಸಿಕೊಳ್ಳದ ಜೆಡಿಎಸ್ ಅಭ್ಯರ್ಥಿ

ವೀರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿತ್ತು. ವೀರಾಜಪೇಟೆ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ವಿಭಜನೆಗೊಂಡು ಜೆಡಿಎಸ್ ಅಭ್ಯರ್ಥಿ ಎಂ.ಎ ಮನ್ಸೂರ್ ಅಲಿ ಅವರು ಮುಸ್ಲಿಂ ಮತಗಳನ್ನು ಪಡೆಯಬಹುದೆಂದು ಅಂದಾಜಿಸಲಾಗಿತ್ತು. ಆದರೆ ಮುಸ್ಲಿಂ ಮತಗಳು ವಿಭಜನೆಯಾಗದಂತೆ ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಎ ಮನ್ಸೂರ್ ಅಲಿ ಅವರೇ ತಟಸ್ಥವಾಗಿದ್ದರು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ವೀರಾಜಪೇಟೆ ಕ್ಷೇತ್ರದಲ್ಲಿ ಮುಸ್ಲಿಮ್ ಮತಗಳು ವಿಭಜನೆಯಾಗದಂತೆ ಜೆಡಿಎಸ್ ಅಭ್ಯರ್ಥಿ ಕೂಡ ಎಚ್ಚರಿಕೆ ಹೆಜ್ಜೆ ಇಟ್ಟಿದ್ದರು. ಪ್ರತೀ ಚುನಾವಣೆಯಲ್ಲಿ ಕನಿಷ್ಟ ಐದು ಸಾವಿರ ಮೇಲೆ ಮತ ಪಡೆಯುತ್ತಿದ್ದ ಜೆಡಿಎಸ್ ಈ ಬಾರಿ ವೀರಾಜಪೇಟೆ ಕ್ಷೇತ್ರದಲ್ಲಿ ಕೇವಲ ೧೧೨೧ ಮತಗಳನ್ನು ಮಾತ್ರ ಪಡೆದಿದೆ.

ಈ ಬಾರಿ ವೀರಾಜಪೇಟೆ ಕ್ಷೇತ್ರದಲ್ಲಿ ಚಲಾವಣೆಗೊಂಡ ಅಲ್ಪಸಂಖ್ಯಾತ ಮತಗಳಲ್ಲಿ ಶೇ. ೯೮ ರಷ್ಟು ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚಲಾವಣೆಯಾಗಿದೆ. ಮುಸ್ಲಿಂ ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್ ಪೊನ್ನಣ್ಣ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಜಾತ್ಯತೀತ ಗೆಲುವಿನ ಅಭ್ಯರ್ಥಿಗೆ ಮತ ನೀಡುವಂತೆ ಕರೆ

ವೀರಾಜಪೇಟೆ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ಗೆಲ್ಲುವ ಜಾತ್ಯತೀತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಜಿಲ್ಲೆಯಲ್ಲಿ ಪ್ರಬಲವಾಗಿರುವ ಎರಡು ಧಾರ್ಮಿಕ ಸಂಘಟನೆಗಳ ಮುಖಂಡರುಗಳು ಕರೆ ನೀಡಿದ್ದರು. ಮತಗಳು ವಿಭಜನೆಯಾಗದಂತೆ ಗೆಲ್ಲುವ ಸಾಮರ್ಥ್ಯದ ಜಾತ್ಯತೀಯ ಮನೋಭಾವದ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ತಮ್ಮ ಕಾರ್ಯಕರ್ತರುಗಳಿಗೆ ಧಾರ್ಮಿಕ ಸಂಘಟನೆಯ ಪ್ರಮುಖರು ಕರೆ ನೀಡಿದ್ದರು.

ನಿಗಮ ಮಂಡಳಿ ನೀಡಲು ಒತ್ತಾಯ

ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಮುಸ್ಲಿಂ ಸಮುದಾಯದವರು ದೊಡ್ಡ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖ ಮುಸ್ಲಿಂ ನಾಯಕರಿಗೆ ನಿಗಮ ಮಂಡಳಿ ಸ್ಥಾನವನ್ನು ನೀಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.