ನಾಪೋಕ್ಲು, ಮೇ ೧೯ : ವಿದ್ಯುತ್ ಕಂಬಗಳ ದುರಸ್ತಿ ಮಾಡುತ್ತಿದ್ದ ಸಂದರ್ಭ ಕಂಬದ ಮೇಲಿನಿಂದ ಬಿದ್ದು ಚೆಸ್ಕಾಂ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಳಿ ಮಳೆಯಿಂದಾಗಿ ಇಲ್ಲಿನ ನಾಡಕಚೇರಿಯ ಬಳಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದವು. ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚೆಸ್ಕಾಂ ಸಿಬ್ಬಂದಿ ವಿಜಯಪುರದ ನಿವಾಸಿ ಯಾಸಿನ್ ಎಂಬವರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ ಕಂಬಕ್ಕೆ ಕಟ್ಟಿದ್ದ ಮರದ ಬಡಿಗೆ ತುಂಡಾದ ಪರಿಣಾಮ ಸಿಬ್ಬಂದಿ ಕೆಳಕ್ಕೆ ಬಿದ್ದಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದಾರೆ. ಕೂಡಲೇ ಇಲಾಖೆಯ ಜೆ.ಇ. ಮತ್ತು ಸಿಬ್ಬಂದಿ ನಾಪೋಕ್ಲುವಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೊಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸ್ಥಳೀಯ ಚೆಸ್ಕಾಂ ಜೆ.ಇ ಹರೀಶ್ ತಿಳಿಸಿದ್ದಾರೆ.