ಶ್ರೀಮಂಗಲ, ಮೇ ೧೯: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಜುಲೈ ೪ ರಂದು ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.
ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಜುಲೈ ೪ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೂರ್ವಾಹ್ನ ೯.೩೦ ಗಂಟೆಯಿAದ ಸಂಜೆ ೭ ಗಂಟೆಯವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ವಿವಿಧ ಕೊಡವ ಸಾಹಿತ್ಯ ಪ್ರಕಾರಗಳ ೨೫ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು.
ಕೂಟದ ಸ್ಥಾಪನೆಗೆ ಕಾರಣಕರ್ತರಾದ ಪ್ರಥಮ ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರಾದಿಯಾಗಿ ಇದುವರೆಗೆ ಕೂಟದಲ್ಲಿ ಕಾರ್ಯ ನಿರ್ವಹಿಸಿದ ಅಧ್ಯಕ್ಷ, ಆಡಳಿತ ಮಂಡಳಿಯವರಿಗೆ, ಇದುವರೆಗೆ ಕೂಟದ ವತಿಯಿಂದ ಬಿಡುಗಡೆಯಾದ ಎಲ್ಲಾ ಪುಸ್ತಕಗಳ ಲೇಖಕರಿಗೆ ಹಾಗೂ ಇದುವರೆಗೆ ಕೂಟದ ಪುಸ್ತಕ ಯೋಜನೆಗೆ ಧನ ಸಹಾಯ ನೀಡಿದ ಎಲ್ಲಾ ದಾನಿಗಳಿಗೂ ಸೇರಿದಂತೆ ಒಟ್ಟು ೩೦೦ ಮಂದಿಗೆ ಸನ್ಮಾನ ಏರ್ಪಡಿಸಲಾಗಿದೆ. ಅಂದು ಬೆಳ್ಳಿ ಹಬ್ಬದ ನೆನಪಿಗಾಗಿ ಪ್ರಕಟಿಸುವ ಅತ್ಯಾಕರ್ಷಕ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ.
ಇದರೊಂದಿಗೆ ವಿವಿಧ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ, ಅತಿಥಿಗಳ ಭಾಷಣ ಸೇರಿದಂತೆ ಹಲವು ವಿಶೇಷಗಳನ್ನೊಳಗೊಂಡ ಈ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕೊಡವ ಭಾಷೆ, ಸಾಹಿತ್ಯ, ಕಲೆ-ಸಂಸ್ಕöÈತಿಯ ಅಭಿಮಾನಿಗಳು ಭಾಗವಹಿಸಲಿದ್ದಾರೆ.
ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ನಡೆಯುವ ಕೂಟದ ಈ ಬೆಳ್ಳಿ ಹಬ್ಬಕ್ಕೆ ಎಲ್ಲಾ ಕೊಡವ ಸಂಘಟನೆಗಳು ಸಹಕಾರ ನೀಡಲಿವೆ ಎಂದು ಪ್ರಕಟಣೆಯಲ್ಲಿ ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.
ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕೂಟದ ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ಹಾಗೂ ಇತರ ನಿರ್ದೇಶಕರು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ಕೂಟದ ವತಿಯಿಂದ ಇದುವರೆಗೆ ಬಿಡುಗಡೆಯಾದ ಪುಸ್ತಕಗಳ ಎಲ್ಲಾ ಲೇಖಕರ ಸಭೆ ತಾ. ೨೬ ರಂದು ಅಪರಾಹ್ನ ೨ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ತಿಳಿಸಿದ್ದಾರೆ.