ಸುಂಟಿಕೊಪ್ಪ, ಮೇ ೧೯: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಇಲ್ಲಿ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ೨೫ನೇ ವರ್ಷದ ಡಿ. ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಇಂದು ಚಾಲನೆ ದೊರೆಯಿತು. ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಬ್ಲೂ ಬಾಯ್ಸ್ ಯವಕ ಸಂಘ ಮತ್ತು ಪನ್ಯ ತಂಡಗಳ ನಡುವಿನ ಪಂದ್ಯಾವಳಿಯನ್ನು ಚೆಂಡು ಒದೆಯುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಬ್ಲೂ ಬಾಯ್ಸ್ ಯವಕ ಸಂಘದ ಸ್ಥಾಪಕ ಅಧ್ಯಕ್ಷ ಜೆರ್ಮಿ ಡಿಸೋಜ, ಹಿರಿಯ ಆಟಗಾರರಾದ ಸೋಮಣ್ಣ, ಪ್ಯಾಟ್ರಿಕ್, ಕೆ.ಪಿ. ಜಗನಾಥ್, ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್. ಕೃಷಿಕ ಶುಂಟಿ ರಾಮಣ್ಣ, ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಸಂಘದ ಅಧ್ಯಕ್ಷ ಆಲಿಕುಟ್ಟಿ, ಮಾಜಿ ಅಧ್ಯಕ್ಷ ಆದಿಶೇಷ, ಪಂಚಾಯಿತಿ ಸದಸ್ಯರು ಹಾಜರಿದ್ದರು. ಬ್ಲೂ ಬಾಯ್ಸ್ ಯವಕ ಸಂಘ ಮತ್ತು ಪನ್ಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲಾರ್ಧದ ೧೦ನೇ ನಿಮಿಷದಲ್ಲಿ ಬ್ಲೂ ಬಾಯ್ಸ್ ಯವಕ ಸಂಘದ ಆಟಗಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ೧-೦ ಗೋಲುಗಳಿಂದ ಬ್ಲೂ ಬಾಯ್ಸ್ ಯವಕ ಸಂಘ ಜಯ ಗಳಿಸಿತು. ಎರಡನೇ ಪಂದ್ಯವು ಎನ್.ವೈ.ಸಿ. ಕೊಡಗರಹಳ್ಳಿ ಹಾಗೂ ಯಾಮಿಟಿ ಎಫ್.ಸಿ. ಗದ್ದೆಹಳ್ಳ ತಂಡಗಳ ನಡುವೆ ನಡೆದು ೨-೧ ಗೋಲುಗಳಿಂದ ಯಾಮಿಟಿ ಎಪ್.ಸಿ ಗದ್ದೆಹಳ್ಳ ಜಯಗಳಿಸಿತು. ಇಂದು ಮಧ್ಯಾಹ್ನ ೩ ಗಂಟೆಗೆ ಇ.ಕೆ.ಎನ್. ಎಫ್.ಸಿ. ಇರಿಟ್ಟಿ ಹಾಗೂ ವಿಜಯನಗರ ಎಫ್.ಸಿ ಮೈಸೂರು. ಹಾಗೂ ೪ ಗಂಟೆಗೆ ಮಿಡ್‌ಸಿಟಿ ಸುಂಟಿಕೊಪ್ಪ ಹಾಗೂ ಸಿಟಿಸನ್ ಎಫ್.ಸಿ. ಉಪ್ಪಳ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ.