ಸಿದ್ದಾಪುರ, ಮೇ ೧೮: ಕಾಡಾನೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಪಾಲಿಬೆಟ್ಟದ ಮಸ್ಕಲ್ ಕಾಫಿ ತೋಟದಲ್ಲಿ ಕಾರ್ಮಿಕನಾಗಿದ್ದ ಬಾಬಿ (೫೭) ಎಂಬವರ ಮೇಲೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆಯೊಂದು ದಾಳಿ ನಡೆಸಿದರಿಂದ ಗಂಭೀರ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಬಿ ಅವರಿಗೆ ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿತ್ತು. ನಂತರ ಕಳೆದೆರಡು ದಿನಗಳ ಹಿಂದೆ ಮೈಸೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿ ಆಗದೆ ಬಾಬಿ ಗುರುವಾರದಂದು ಮೃತಪಟ್ಟಿದ್ದಾರೆ. ಮೃತ ಬಾಬಿ ಪತ್ನಿ ಹಾಗೂ ಈರ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಘಟನೆಗೆ ಸಂಬAಧಿಸಿದAತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ಬಾಬಿಯ ಮೃತದೇಹವನ್ನು ಮೈಸೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಸ್ಥಳಕ್ಕೆ ಸಿದ್ದಾಪುರದ ಪೊಲೀಸರು ಹಾಗೂ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಭೇಟಿ ನೀಡಿದರು.

ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟಿದ್ದಲ್ಲದೇ ಇತ್ತೀಚೆಗೆ ಇನ್ನೆರಡು ಮಂದಿ ಕಾಡಾನೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಕಾಡಾನೆ ಸೆರೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ ವಕ್ತಾರ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಕೆಲವೇ ದಿನಗಳಲ್ಲಿ ಶಾಲೆ-ಕಾಲೇಜು ಆರಂಭವಾಗುತ್ತಿದ್ದು, ಭಯದ ವಾತಾವರಣ ಮೂಡಿದೆ. ಕಾಡಾನೆಗಳ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಸ್ತೆ ತಡೆ ಪ್ರತಿಭಟನೆ

ಮೈಸೂರಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಆಂಬುಲೆನ್ಸ್ ವಾಹನದಲ್ಲಿ ಪಾಲಿಬೆಟ್ಟಕ್ಕೆ ಮೃತದೇಹವನ್ನು ತಂದು ಮಸ್ಕಲ್ ಕಾಫಿ ತೋಟದ ಮುಂಭಾಗದ ಅಮ್ಮತ್ತಿ ಪಾಲಿಬೆಟ್ಟ ಮುಖ್ಯ ರಸ್ತೆಯಲ್ಲಿ ರಸ್ತೆತಡೆ ಪ್ರತಿಭಟನೆ ಮಾಡುವ ಮೂಲಕ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಮಸ್ಕಲ್ ಕಾಫಿ ತೋಟದಲ್ಲಿ ಕಾಡು ಪ್ರಾಣಿಗಳ ಭಯದ ನಡುವೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಕಾಡಾನೆ ಹಾವಳಿ ಇದ್ದರು ಸೂಕ್ತ ರಕ್ಷಣೆ ನೀಡದೆ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ.ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತೆರಳಲು ವಾಹನಗಳನ್ನು ಬಿಡದೆ ಗೇಟ್ ಲಾಕ್ ಮಾಡಲಾಗುತ್ತಿದೆ. ಆಸ್ಪತ್ರೆಗೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಕಾರ್ಮಿಕರು ಕಿಲೋಮೀಟರ್‌ಗಟ್ಟಲೆ ನಡೆದು ತೋಟದಲ್ಲಿ ಲೈನ್ ಮನೆಗಳಿಗೆ ತೆರಳಬೇಕಾಗಿದೆ. ಯಾವುದೇ ರಕ್ಷಣೆ ನೀಡದೆ ಹಿಂದೆಯೂ ಹಲವು ಮಂದಿಗೆ ಕಾಡಾನೆ ಹಾವಳಿಯಿಂದ ಗಾಯಗಳಾಗಿದ್ದರು ಸೂಕ್ತ ಚಿಕಿತ್ಸೆಗೆ ಹಣ ನೀಡದೆ ಕಡೆಗಣಿಸಲಾಗಿದೆ ಎಂದು ತೋಟದ ಮಾಲೀಕರ ವಿರುದ್ಧ ಕಾರ್ಮಿಕರು ಆರೋಪ ವ್ಯಕ್ತಪಡಿಸಿದರು.

ತೋಟದ ವ್ಯವಸ್ಥಾಪಕ ಪದ್ಮನಾಭ ಹಾಗೂ ಸಿಬ್ಬಂದಿ ಸುಬ್ರಮಣಿ ಎಂಬವರನ್ನು ತರಾಟೆಗೆ ತೆಗೆದುಕೊಂಡರು

ಸ್ಥಳದಲ್ಲಿ ಜಮಾಯಿಸಿದ ಬೆಳೆಗಾರರು, ಸ್ಥಳೀಯರು, ಕಾರ್ಮಿಕರು ಸೇರಿ ಅರಣ್ಯ ಇಲಾಖೆ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿ ಕಾಡು ಪ್ರಾಣಿಗಳ ಹಾವಳಿಯನ್ನು ಕೂಡಲೆ ತಡೆಗಟ್ಟಬೇಕೆಂದು ಒತ್ತಾಯಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಮೃತರ ಕುಟುಂಬಕ್ಕೆ ಮೊದಲ ಕಂತಿನ ಸರ್ಕಾರದ ಪರಿಹಾರ ಚೆÀಕ್ ನೀಡಿದ್ದಲ್ಲದೆ ಕುಟುಂಬದ ಒಬ್ಬರನ್ನು ದಿನಗೂಲಿ ನೌಕರರಾಗಿ ನೇಮಿಸಿಕೊಳ್ಳಲಾಗುವುದು. ಕಾಡಾನೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕಾಡಾನೆ ಹಾವಳಿ ನಿಯಂತ್ರಣಕ್ಕೂ ಮುಂದಾಗುವುದಾಗಿ ಭರವಸೆ ನೀಡಿದರು.

ಕಾರ್ಮಿಕರ ಬೇಡಿಕೆಯನ್ನ ಮಾಲೀಕರೊಂದಿಗೆ ಚರ್ಚಿಸಿ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು

ಪ್ರತಿಭಟನೆ ಸಂದರ್ಭ ಅಮ್ಮತ್ತಿ ಪಾಲಿಬೆಟ್ಟ ಮಾರ್ಗದಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ದವು.

ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಗ್ರಾಮ ಪಂಚಾಯಿತಿ ಉಪಾಧ್ಯಕÀ್ಷ ಪವಿತ್ರ, ಸದಸ್ಯ ಪುಲಿಯಂಡ ಬೋಪಣ್ಣ, ಹೊಸೂರು ಗ್ರಾ.ಪಂ. ಅಧ್ಯಕ್ಷೆ ಶಾಂತಿ ಸೋಮಯ್ಯ, ಸದಸ್ಯರಾದ ರತ್ನ ಸುಬ್ಬಯ್ಯ, ಗೋಪಿ ಚಿನ್ನಪ್ಪ, ಅರಣ್ಯ ಇಲಾಖೆಯ ಡಿಎಫ್‌ಓ ಶರಣ ಬಸಪ್ಪ, ಎಸಿಎಫ್ ನೆಹರು, ಆರ್‌ಎಫ್‌ಓ ದೇವಯ್ಯ, ಡಿಆರ್‌ಎಫ್‌ಓ ಸಂಜೀತ್ ಸೋಮಯ್ಯ, ಸಿದ್ದಾಪುರ ಠಾಣಾಧಿಕಾರಿ ದಿಲೀಪ್ ಕುಮಾರ್, ಕಾರ್ಮಿಕರು ಮತ್ತಿತರರು ಹಾಜರಿದ್ದರು. - ವಾಸು, ಪುತ್ತಂ ಪ್ರದೀಪ್