ಮಡಿಕೇರಿ, ಮೇ ೧೭: ವೀರಾಜಪೇಟೆ ಕ್ಷೇತ್ರದಿಂದ ಇದೇ ಪ್ರಥಮ ಬಾರಿಗೆ ಕೊಡವ ಜನಾಂಗಕ್ಕೆ ಸೇರಿದ ಓರ್ವ ಶಾಸಕರಾಗಿ ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಬೆಂಗಳೂರು ಕೊಡವ ಸಮಾಜದ ಪ್ರಮುಖರು ಭೇಟಿ ಮಾಡಿ ಸನ್ಮಾನಿಸಿದರು. ಬೆಂಗಳೂರಿನಲ್ಲಿ ಪೊನ್ನಣ್ಣ ಅವರನ್ನು ಸಮಾಜದ ಹಾಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಇತರ ಪ್ರಮುಖರು ಭೇಟಿ ಮಾಡಿ ಸನ್ಮಾನಿಸಿ ಚರ್ಚೆ ನಡೆಸಿದರು. ಈ ಸಂದರ್ಭ ಸಮಾಜದ ಅಧ್ಯಕ್ಷರಾದ ಕರವಟ್ಟಿರ ಪೆಮ್ಮಯ್ಯ, ಕಾರ್ಯದರ್ಶಿ ಚಿರಿಯಪಂಡ ಲೆ.ಕ. ವಿವೇಕ್ ಮುತ್ತಣ್ಣ ಸೇರಿದಂತೆ ಪದಾಧಿಕಾರಿಗಳು, ಇತರ ಪ್ರಮುಖರು ಪಾಲ್ಗೊಂಡಿದ್ದರು.
ಖರ್ಗೆಗೆ ಪತ್ರ
ನೂತನ ಶಾಸಕ ಪೊನ್ನಣ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಸಮಾಜದ ಮೂಲಕ ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ರವಾನಿಸಿ ಮನವಿ ಮಾಡಲಾಗಿದೆ. ರಾಜ್ಯ ಹಾಗೂ ದೇಶಕ್ಕೆ ಕೊಡಗು ಸಾಕಷ್ಟು ಕೊಡುಗೆ ನೀಡಿದೆ. ಆದರೆ, ಕೆಲವಾರು ವರ್ಷಗಳಿಂದ ಜಿಲ್ಲೆಯ ಸಮಸ್ಯೆಗಳು ಈಡೇರುತ್ತಿಲ್ಲ. ಅಲ್ಲದೆ, ಹಲವು ಸಮಯದಿಂದ ಕೊಡಗಿನವರನ್ನೇ ಸಚಿವರಾಗಿಯೂ ಜಿಲ್ಲೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ವಿಪಕ್ಷ ನಾಯಕ ಎ.ಕೆ. ಸುಬ್ಬಯ್ಯ ಅವರ ಪುತ್ರರೂ ಆಗಿರುವ ಪ್ರತಿಭಾನ್ವಿತ ಶಾಸಕ ಪೊನ್ನಣ್ಣ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.