ಮಡಿಕೇರಿ, ಮೇ ೧೭ : ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಮಡಿಕೇರಿ-ಕುಟ್ಟ ರಸ್ತೆಯ ೮.೩೦ ಕಿ.ಮೀ.ನಿಂದ ೧೦ ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡು ಕಾಂಕ್ರೀಟ್ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ ೧೯೭೩ ರ ಸೆಕ್ಷನ್ ೧೪೪ ಮತ್ತು ಮೋಟಾರು ವಾಹನ ಕಾಯ್ದೆ ೧೯೮೮ ರ ಕಲಂ ೧೧೫ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು ೧೯೮೯ ರ (ತಿದ್ದುಪಡಿ ನಿಯಮಗಳು ೧೯೯೦) ನಿಯಮ ೨೨೧ಎ(೫) ನಲ್ಲಿ ದತ್ತವಾದ ಅಧಿಕಾರದಂತೆ ಸೋಮವಾರಪೇಟೆ ತಾಲೂಕು ಮಡಿಕೇರಿ-ಕುಟ್ಟ ರಸ್ತೆಯ ೮.೩೦ ಕಿ.ಮೀ.ನಿಂದ ೧೦ ಕಿ.ಮೀ. ವರೆಗಿನ ರಸ್ತೆಯಲ್ಲಿ ತಾ. ೨೨ ರಿಂದ ಜುಲೈ ೧೦ ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ಬದಲಿ ರಸ್ತೆಯಾದ ಮಡಿಕೇರಿ-ಸುಂಟಿಕೊಪ್ಪ-ಚೆಟ್ಟಳ್ಳಿ ಮಾರ್ಗವನ್ನು ಬಳಸುವುದು. ಈ ಬಗ್ಗೆ ಮೋಟಾರು ವಾಹನ ಕಾಯ್ದೆ ೧೯೮೮ ರ ಸೆಕ್ಷನ್ ೧೧೬ ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು ೧೯೮೯ ರ (ತಿದ್ದುಪಡಿ ನಿಯಮಗಳು ೧೯೯೦) ನಿಯಮ ೨೨೧ ಎ (೨) ರಂತೆ ಅವಶ್ಯವಿರುವ ಸಂಜ್ಞೆ, ಸೂಚನಾ ಫಲಕವನ್ನು ಅಳವಡಿಸಲು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೊಡಗು ವಿಭಾಗ ಮಡಿಕೇರಿ ಇವರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚನೆ ನೀಡಿದ್ದಾರೆ.