ಸೋಮವಾರಪೇಟೆ, ಮೇ ೧೭: ಕಂದಾಯ ಇಲಾಖೆ ಸೇರಿದಂತೆ ಸರ್ಕಾರದ ಇತರ ಇಲಾಖೆಗಳಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರಕ್ಕೆ ಬಿಜೆಪಿ ಶಾಸಕರು ಕಡಿವಾಣ ಹಾಕದೇ ಇರುವುದರಿಂದ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಕಂದಾಯ ಸೇರಿದಂತೆ ಸರ್ಕಾರದ ಇತರ ಇಲಾಖೆಗಳ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧದ ಕ್ರಮಕ್ಕಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೊದಲಿಗೆ ತಾಲೂಕು ಕಚೇರಿಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಲು ಕ್ರಮವಹಿಸಲಾಗುವುದು ಎಂದರು. ಬಿಜೆಪಿ ಸರ್ಕಾರ ಹಾಗೂ ಶಾಸಕರ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಲೆಯೇ ಇರಲಿಲ್ಲ. ಶಾಸಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು ಎಂದು ನಾವು ಹೇಳುತ್ತಿಲ್ಲ; ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಶಾಸಕ ರಂಜನ್ ಸಂಪೂರ್ಣ ವಿಫಲವಾಗಿದ್ದರು ಎಂದು ದೂರಿದರು.
ಮಡಿಕೇರಿ ಕ್ಷೇತ್ರದಲ್ಲಿ ನಡೆದಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆಯೂ ತನಿಖೆಗೆ ಒತ್ತಾಯಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ತಡೆ ಹಾಕಲೇಬೇಕೆಂದು ನೂತನ ಶಾಸಕ ಮಂಥರ್ ಗೌಡ ಅವರಿಗೆ ಹೇಳಿದ್ದೇವೆ. ಶಾಸಕರೂ ಒಪ್ಪಿದ್ದಾರೆ ಎಂದು ಸತೀಶ್ ತಿಳಿಸಿದರು.
ಭ್ರಷ್ಟ ಅಧಿಕಾರಿಗಳು ತಾವಾಗಿಯೇ ಗಂಟುಮೂಟೆ ಕಟ್ಟಿಕೊಂಡು ಹೊರ ಹೋಗಲಿ. ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕುವುದರೊಂದಿಗೆ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್, ಬಸವರಾಜು, ಖಜಾಂಚಿ ಚೇತನ್ ಇದ್ದರು.