(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಮೇ ೧೭: ಡಾ. ಮಂಥರ್ ಗೌಡ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸುವುದರ ಮೂಲಕ ಹೊಸ ಇತಿಹಾಸವನ್ನು ಮಡಿಕೇರಿ ಕ್ಷೇತ್ರದಲ್ಲಿ ಸೃಷ್ಟಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯ ನಾಯಕರೇ ಹಿಂದೇಟು ಹಾಕಿದ್ದರು.
ಕೊಡಗಿನಲ್ಲಿ ನಂಟು ಇದ್ದರೂ, ಹಾಸನ ಜಿಲ್ಲೆಯ ಅರಕಲಗೂಡುವಿನಲ್ಲಿ ವಾಸವಿರುವ ಡಾ. ಮಂಥರ್ ಗೌಡ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡಲಾಗಿತ್ತು. ಬಿಜೆಪಿ ಬೆಂಬಲಿತ ಚುನಾಯಿತ ಪ್ರತಿನಿಧಿಗಳೇ ಅಧಿಕ ಸಂಖ್ಯೆಯಲ್ಲಿ ಇದ್ದ ಕೊಡಗಿನಲ್ಲಿ ಡಾ. ಮಂಥರ್ ಬಿಜೆಪಿ ಪಾಳಯಕ್ಕೆ ಠಕ್ಕರ್ ನೀಡಿ ಅಲ್ಪ ಮತಗಳಿಂದ ಸೋಲು ಕಂಡಿದ್ದರು.
ನAತರದ ದಿನಗಳಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಕಾಣಿಸಿಕೊಂಡಿದ್ದರು. ಕ್ಷೇತ್ರದಲ್ಲಿ ನಡೆಯುತ್ತಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳು ಹಾಗೂ ಬಡ ಜನರಿಗೆ ಆರ್ಥಿಕ ನೆರವು ನೀಡಿ ಮಡಿಕೇರಿ ಕ್ಷೇತ್ರದಲ್ಲಿ ಮಂಥರ್ ಗೌಡರು ಹತ್ತಿರವಾಗಿದ್ದರು.
ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ದಂಡೇ ಕಾಂಗ್ರೆಸ್ ಪಾಳಯದಲ್ಲಿ ಇತ್ತು. ಬಿ.ಎ. ಜೀವಿಜಯ, ಹೈ ಕೋರ್ಟ್ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಹಾಗೂ ಡಾ. ಮಂಥರ್ ಗೌಡರ ಹೆಸರು ಅಂತಿಮವಾಗಿತ್ತು.
ಈ ಮೂವರಲ್ಲಿ ಡಾ. ಮಂಥರ್ ಗೌಡ ಅವರಿಗೆ ಕಾಂಗ್ರೆಸ್ ಮಣೆ ಹಾಕಿತ್ತು. ಮಾಜಿ ಶಾಸಕ ಹಾಗೂ ಒಕ್ಕಲಿಗರ ಪ್ರಭಾವಿ ನಾಯಕ ಬಿ.ಎ ಜೀವಿಜಯ ಅವರು ಮಂಥರ್ ಗೌಡ ಅವರಿಗೆ ಟಿಕೆಟ್ ನೀಡಿದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಅದಲ್ಲದೇ ಮಂಥರ್ ಗೌಡ ಅವರನ್ನು ಸೋಲಿಸುವಂತೆ ಕರೆ ನೀಡಿ ಸ್ಥಳೀಯ ಅಭ್ಯರ್ಥಿಗಳಿಗೆ ಮತ ನೀಡುವಂತೆ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದರು.
ಉತ್ಸಾಹದಲ್ಲಿದ್ದ ಮಂಥರ್ ಗೌಡ ಅವರಿಗೆ ಕೊನೆಯ ಕ್ಷಣದಲ್ಲಿ ಜೀವಿಜಯ ಹಾಗೂ ಶನಿವಾರಸಂತೆ ಭಾಗದ ಬಿ.ಎ. ಅನಂತ್ ಕುಮಾರ್ ಅವರ ರಾಜೀನಾಮೆ ಹೊಡೆತ ನೀಡಬಹುದು ಎಂದು ವಿಶ್ಲೇಷಿಸಲಾಗಿತ್ತು.
ಆದರೆ ಎಲ್ಲಾ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡು ದಶಕಗಳ ಬಳಿಕ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟರು.
ಕೈ ಹಿಡಿದ ಒಕ್ಕಲಿಗ ಗೌಡರು
ಮಡಿಕೇರಿ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಒಕ್ಕಲಿಗ ಗೌಡ ಮತದಾರರು ಇದ್ದಾರೆ. ಕಾಂಗ್ರೆಸ್ ಪಕ್ಷವು ಒಕ್ಕಲಿಗ ಗೌಡ ಜನಾಂಗದ ಅಭ್ಯರ್ಥಿ ಡಾ. ಮಂಥರ್ ಗೌಡ ಅವರಿಗೆ ಟಿಕೆಟ್ ನೀಡಿತ್ತು. ಬಿಜೆಪಿಯಿಂದ ಕೊಡವ ಜನಾಂಗದ ಅಭ್ಯರ್ಥಿ ಅಪ್ಪಚ್ಚು ರಂಜನ್ ಹಾಗೂ ಜೆಡಿಎಸ್ ಪಕ್ಷದಿಂದ ಕೊಡವ ಜನಾಂಗದ ನಾಪಂಡ ಮುತ್ತಪ್ಪ ಸ್ಪರ್ಧಿಸಿದ್ದರು.
ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಜಾತಿ ಲೆಕ್ಕಾಚಾರದ ಚುನಾವಣೆ ನಡೆದಿದೆ.
ಕಳೆದ ಮೂರು ಚುನಾವಣೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಅವರನ್ನು ಬೆಂಬಲಿಸುತ್ತಾ ಬಂದಿರುವ ಒಕ್ಕಲಿಗ ಹಾಗೂ ಅರೆಭಾಷೆ ಗೌಡ ಜನಾಂಗದವರು ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಮಂಥರ್ ಗೌಡ ಅವರ ಕೈ ಹಿಡಿದಿದ್ದಾರೆ.
ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ನಡೆಯುವುದೇ ಇಲ್ಲ ಎಂಬ ವಿಶ್ವಾಸದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದರು. ಆದರೆ ಇದೇ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ವರ್ಕೌಟ್ ಆಗಿದೆ.
ಜಿಲ್ಲೆಯಲ್ಲಿ ಒಕ್ಕಲಿಗ ಗೌಡ ಜನಾಂಗದ ಪ್ರಭಾವಿ ನಾಯಕ ಮಾಜಿ ಶಾಸಕ ಬಿ.ಎ ಜೀವಿಜಯ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಂಥರ್ ಸೋಲಿಸಲು ಕರೆ ನೀಡಿದ್ದರು. ಇದುವರೆಗೆ ಬಿ.ಎ. ಜೀವಿಜಯ ಅವರ ಕೈ ಹಿಡಿಯದ ಅರೆಭಾಷೆ - ಒಕ್ಕಲಿಗರು ಮಂಥರ್ ಗೌಡ ಅವರಿಗೆ ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ.
ಅದಲ್ಲದೇ ಮಂಥರ್ ಗೌಡ ಹೊರಗಿನವರು ಎಂಬ ಪ್ರಚಾರಕ್ಕೂ ಕೂಡ ಮತದಾರ ಸೊಪ್ಪು ಹಾಕದೆ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ.
ವಿಭಜನೆಗೊಳ್ಳದ ಅಲ್ಪಸಂಖ್ಯಾತ ಮತಗಳು
ಪ್ರತೀ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಗೆಲುವು-ಸೋಲಿನಲ್ಲಿ ನಿರ್ಣಾಯಕ ಮತದಾರರಾಗಿರುವ ಅಲ್ಪಸಂಖ್ಯಾತ ಮತಗಳು ಈ ಭಾರಿಯ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ವಿಭಜನೆಗೊಳ್ಳದೆ ಕಾಂಗ್ರೆಸ್ ಪಕ್ಷಕ್ಕೆ ಚಲಾವಣೆಯಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಾಧಿಸಲು ಸಾಧ್ಯವಾಯಿತು.
ಮಡಿಕೇರಿ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಲ್ಲಿ ಕೂಡ ಅಲ್ಪಸಂಖ್ಯಾತ ಮತಗಳು ವಿಭಜನೆಗೊಂಡು ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದರು. ಈ ಬಾರಿ ಕೂಡ ಅದೇ ಆತಂಕ ಕಾಂಗ್ರೆಸ್ ಅಭ್ಯರ್ಥಿಗೆ ಇತ್ತು. ಇದೇ ಮೊದಲ ಬಾರಿಗೆ ಎಸ್.ಡಿ.ಪಿ.ಐ ಅಭ್ಯರ್ಥಿ ಸ್ಪರ್ಧಿಸಿದ್ದರು. ಅದಲ್ಲದೇ ಜೆಡಿಎಸ್ ಅಭ್ಯರ್ಥಿಗೂ ಕೂಡ ಅಲ್ಪಸಂಖ್ಯಾತ ಮತಗಳು ಬೀಳುವ ಸಾಧ್ಯತೆ ಇತ್ತು.
ಅಲ್ಪಸಂಖ್ಯಾತ ಮತಗಳು ವಿಭಜನೆಗೊಂಡು ಬಿಜೆಪಿ ಗೆಲ್ಲುವ ಲೆಕ್ಕಾಚಾರದಲ್ಲಿ ಇತ್ತು. ಆದರೆ ಎಸ್.ಡಿ.ಪಿ.ಐ. ಅಭ್ಯರ್ಥಿಗೆ ನೋಟಾಕ್ಕಿಂತಲೂ ಜಾಸ್ತಿ ಮತ ಬಿದ್ದಿಲ್ಲ. ಅವರ ಕಾರ್ಯಕರ್ತರೇ ಮತ ಹಾಕದೆ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರಿಗೆ ಮತ ನೀಡಿದ್ದಾರೆ.
ಅದಲ್ಲದೇ ಜೆಡಿಎಸ್ ಪರವಾಗಿ ಇದ್ದ ೩ ರಿಂದ ೪ ಸಾವಿರ ಅಲ್ಪಸಂಖ್ಯಾತ ಮುಸ್ಲಿಂ ಮತಗಳು ಕೂಡ ಕೊನೆಯ ಕ್ಷಣದಲ್ಲಿ ಮಂಥರ್ ಗೌಡ ಅವರ ಪರವಾಗಿ ಚಲಾವಣೆಯಾಯಿತು. ಇದೇ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ವಿಭಜನೆಗೊಳ್ಳದೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚಲಾವಣೆಯಾಗಿದ್ದು.
ಜೆಡಿಎಸ್ ತಟಸ್ಥ, ಕಾಂಗ್ರೆಸ್ಗೆ ವರದಾನ
ಮತದಾನಕ್ಕೆ ಒಂದು ದಿನ ಬಾಕಿ ಉಳಿದಿರುವಾಗ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಟಸ್ಥವಾಗಿ ಉಳಿದಿದ್ದರು.
ಇದರ ಪರಿಣಾಮ ಜೆಡಿಎಸ್ ಬಲಿಷ್ಠವಾಗಿದ್ದ ಉತ್ತರ ಕೊಡಗಿನ ಹಲವು ಭಾಗಗಳಲ್ಲಿ ಜೆಡಿಎಸ್ ಮತಗಳು ಕಾಂಗ್ರೆಸ್ ಪಕ್ಷದ ಪರವಾಗಿ ಚಲಾವಣೆಯಾಗಿದೆ. ಯಾವುದೇ ಬೂತ್ ನಲ್ಲಿ ಜೆಡಿಎಸ್ ಪಕ್ಷ ೧೫೦ ಮತಗಳ ಗಡಿ ದಾಟಲೇ ಇಲ್ಲ.
ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರಿಗೆ ಮತ ನೀಡಿದ್ದರು. ಜೆಡಿಎಸ್ ಅಭ್ಯರ್ಥಿ ಪ್ರಬಲವಾಗಿ ಕಣದಲ್ಲಿ ಇದ್ದರೆ ತ್ರಿಕೋನ ಸ್ಪರ್ಧೆಯಿಂದ ಸುಲಭದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿತ್ತು.
ಕೊನೆಯ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ತಟಸ್ಥವಾದ ಹಿನ್ನೆಲೆ ಜೆಡಿಎಸ್ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಚಲಾವಣೆಯಾಗಿ ಡಾ ಮಂಥರ್ ಗೌಡ ಅವರು ಗೆಲುವು ಸಾಧಿಸಿದರು.