ಕೂಡಿಗೆ, ಮೇ ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಾಲಯ ಸೇವಾ ಸಮಿತಿಯ ವತಿಯಿಂದ ಬಸವೇಶ್ವರ ದೇವರ ವಾರ್ಷಿಕ ಮಹಾಪೂಜೆ ವಿಶೇಷ ಹೋಮ ಹವನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಪೂಜ್ಯೋತ್ಸವದ ಅಂಗವಾಗಿ ಕಾವೇರಿ ನದಿಯಿಂದ ಗಂಗೆಯ ಕಲಶವನ್ನು ತಂದು ಅಭಿಷೇಕವನ್ನು ಮಾಡಿದ ನಂತರ ನವಗ್ರಹ ಹೋಮ, ಶಾಂತಿ ಹೋಮ ಸೇರಿದಂತೆ ವಿವಿಧ ವಿಶೇಷ ಪೂಜೆ ನಡೆಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಪೂಜಾ ಕೈಂಕರ್ಯಗಳನ್ನು ದೇವಾಲಯ ಪ್ರಧಾನ ಅರ್ಚಕ ಚಂದ್ರಮುರುಳಿ ಆರಾಧ್ಯ ತಂಡದವರು ನೆರವೇರಿಸಿದರು. ಆಗಮಿಸಿದ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷ ಉದಯ, ಕಾರ್ಯದರ್ಶಿ ಯೊಗೇಶ್, ಉಪಾಧ್ಯಕ್ಷ ವಿಜಯಕುಮಾರ್, ಸೇರಿದಂತೆ ಸಮಿತಿಯ ಸದಸ್ಯರು, ನೂರಾರು ಭಕ್ತರು ಭಾಗವಹಿಸಿದ್ದರು.