ಮಡಿಕೇರಿ, ಮೇ ೧೭ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲಾಗಿಲ್ಲ. ಕಾಂಗ್ರೆಸ್ ಪಕ್ಷವು ಬಹಳ ವರ್ಷಗಳ ನಂತರ ಗೆಲುವು ಸಾಧಿಸಿದ್ದು, ದ್ವೇಷದ ರಾಜಕಾರಣ ಮಾಡುವದನ್ನು ನಿಲ್ಲಿಸಿ ಅಭಿವೃದ್ಧಿಯತ್ತ ಗಮನಹರಿಸಬೇಕೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿಗೆ ಸೋಲಾಗಿದೆ. ಜನಾಭಿಪ್ರಾಯವನ್ನು ಸ್ವೀಕಾರ ಮಾಡುತ್ತೇವೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿಗೆ ಮತಗಳು ಲಭಿಸಿವೆ. ಎರಡೂ ಕ್ಷೇತ್ರಗಳಲ್ಲಿ ಸೇರಿ ೧೩೦೭೯ ಮತಗಳು ಹೆಚ್ಚಿಗೆ ಲಭಿಸಿವೆ. ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಿದ್ದಾರೆ. ಆದರೆ, ಜೆಡಿಎಸ್, ಎಸ್ಡಿಪಿಐ ಹಾಗೂ ಪಕ್ಷೇತರರು ಒಟ್ಟಾಗಿ ಬಿಜೆಪಿಯನ್ನ ದೂರವಿಡಲು ಪ್ರಯತ್ನಿಸಿದ್ದಾರೆ. ಆದರೂ ದೃತಿಗೆಡುವದಿಲ್ಲ. ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿರುವದಾಗಿ ಹೇಳಿದರು.
ಬಹಳ ವರ್ಷಗಳ ನಂತರ ಗೆದ್ದಿರುವ ಕಾಂಗ್ರೆಸ್ ಪಕ್ಷವು ಅಭಿವೃದ್ಧಿಗೆ ಒತ್ತು ನೀಡಲಿ. ಎಮ್ಮೆಮಾಡುವಿನಲ್ಲಿ ನಡೆದ ಘಟನೆಯ ರೀತಿಯಲ್ಲಿ ದ್ವೇಷದ ರಾಜಕಾರಣ ಮಾಡಬಾರದು. ಯಾವದೇ ರೀತಿಯ ವಿರೋಧಗಳು ಬಂದರೂ ಎದುರಿಸಲು ಸಿದ್ಧವಾಗಿದ್ದು, ಪಕ್ಷ ಸಂಘಟನೆಗೆ ಮುಂದಾಗುವದಾಗಿ ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಮಾತನಾಡಿ; ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳು ಹಾಗೂ ಗ್ಯಾರಂಟಿ ಕಾರ್ಡ್ನಲ್ಲಿ ಘೋಷಣೆ ಮಾಡಿರುವದನ್ನು ಕೂಡಲೇ ಈಡೇರಿಸಬೇಕಿದೆ. ಜನರು ಎಲ್ಲವನ್ನೂ ಗಮನಿಸಲಿದ್ದು, ಕೇವಲ ಭರವಸೆಯಾಗಬಾರದು. ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದಿರುವದು ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದರು. ಈ ಹಿಂದಿನ ಅವಧಿಯಲ್ಲಿ ಸಾಕಷ್ಟು ಅನುದಾನದೊಂದಿಗೆ ಅಭಿವೃದ್ಧಿ ಯಾಗಿವೆ. ಗೆದ್ದು ಬಂದಿರುವ ಕಾಂಗ್ರೆಸ್ ಕೂಡ ಅಭಿವೃದ್ಧಿ ಮಾಡಲಿ ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ ಮಾತನಾಡಿ; ಜನರ ಆದೇಶವನ್ನು ಸ್ವೀಕಾರ ಮಾಡಿದ್ದೇವೆ. ವಿರೋಧ ಪಕ್ಷವಾಗಿಯೂ ಕೆಲಸ ಮಾಡಿದ ಅನುಭವವಿದೆ. ಅಧಿಕಾರ ಸಿಕ್ಕಾಗ ಕೆಲಸ ಮಾಡಿ ತೋರಿಸಿದ್ದೇವೆ. ಮುಖ್ಯಮಂತ್ರಿ
(ಮೊದಲ ಪುಟದಿಂದ) ಸ್ಥಾನಕ್ಕಾಗಿ ರಾಜ್ಯದಲ್ಲಿ ಕುರುಬ ಹಾಗೂ ಒಕ್ಕಲಿಗ ಸಮುದಾಯದ ನಡುವೆ ಕಿತ್ತಾಟ ಆರಂಭವಾಗಿದೆ. ಅದನ್ನು ನಿಲ್ಲಿಸಿ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ. ವಿಶ್ವಾಸ ಕಳೆದುಕೊಳ್ಳದೆ ಭರವಸೆಗಳನ್ನು ಈಡೇರಿಸಲಿ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಉಪಾಧ್ಯಕ್ಷ ಬಿ.ಕೆ.ಅರುಣ್ಕುಮಾರ್, ಪ್ರಧಾನ ಕಾರ್ಯದರ್ಶಿ ಹುಲ್ಲೂರಿಕೊಪ್ಪ ಮಾದಪ್ಪ ಇದ್ದರು.
ಕಾಂಗ್ರೆಸ್ ದ್ವೇಷದ ರಾಜಕೀಯ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ