ಮಡಿಕೇರಿ, ಮೇ ೧೭ : ಸುಂಟಿಕೊಪ್ಪದ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ರಾಜ್ಯಮಟ್ಟದ ಡಿ.ಶಿವಪ್ಪ ಸ್ಮಾರಕ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದ್ದು, ತಾ.೧೯ ರಿಂದ ೨೮ ರವರೆಗೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಾನಿ, ಶಿವಪ್ಪ ಅವರ ಪುತ್ರ ವಿನೋದ್ ಶಿವಪ್ಪ ಅವರು; ಇದು ೨೫ನೇ ವರ್ಷದ ಪಂದ್ಯಾವಳಿಯಾಗಿದ್ದು, ಬೆಳ್ಳಿಮಹೋತ್ಸವದ ಅಂಗವಾಗಿ ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ. ಸುಂಟಿಕೊಪ್ಪ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು ೨೨ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು. ೩೮ ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಬ್ಲೂಬಾಯ್ಸ್ ಯುವಕ ಸಂಘ ನಿರಂತರವಾಗಿ ೧೯೯೬ರಿಂದ ಫುಟ್ಬಾಲ್ ಪಂದ್ಯಾವಳಿ ಆಯೋಜನೆ ಮಾಡುತ್ತಾ ಬರುತ್ತಿದೆ. ದಾನಿಗಳ ಸಹಕಾರದೊಂದಿಗೆ ಪಂದ್ಯಾವಳಿ ಏರ್ಪಡಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಆಯೋಜನೆ ಮಾಡಲು ಸಾಧ್ಯವಾಗಿಲ್ಲ. ಈ ವರ್ಷದಿಂದ ಮತ್ತೆ ಆರಂಭಿಸುತ್ತಿರುವದಾಗಿ ತಿಳಿಸಿದರು.
ತಾ.೧೯ರಂದು ಮಧ್ಯಾಹ್ನ ಮೂರು ಗಂಟೆಗೆ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಉದ್ಘಾಟನೆ ಮಾಡಲಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ರಾಜ್, ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಜೆರ್ಮಿ ಡಿಸೋಜ, ಹಿರಿಯ ಆಟಗಾರ ಪ್ಯಾಟ್ರಿಕ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪ್ರತಿನಿತ್ಯ ಎರಡು ಪಂದ್ಯಾಟಗಳು ನಡೆಯಲಿದ್ದು, ಭಾನುವಾರಗಳಂದು ಮೂರು ಪಂದ್ಯಾಟಗಳು ನಡೆಯಲಿವೆ. ಪಂದ್ಯಾವಳಿಯಲ್ಲಿ ಬೆಂಗಳೂರು, ಮಂಡ್ಯ, ಮೈಸೂರು, ಕೇರಳ, ನಂಜನಗೂಡು ಮುಂತಾದೆಡೆಗಳಿAದ ಸೇರಿದಂತೆ ಕುಶಾಲನಗರ, ಬೆಟ್ಟಗೇರಿ, ಕೊಡಗರಹಳ್ಳಿ, ಸುಂಟಿಕೊಪ್ಪದ ತಂಡಗಳೂ ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
(ಮೊದಲ ಪುಟದಿಂದ)
ಒAದು ಲಕ್ಷ ಬಹುಮಾನ
ಪಂದ್ಯಾವಳಿಯಲ್ಲಿ ವಿಜಯಶಾಲಿ ಯಾಗುವ ತಂಡಕ್ಕೆ ರೂ. ಒಂದು ಲಕ್ಷ ನಗದು ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಗುವದು. ದ್ವಿತೀಯ ಸ್ಥಾನಿಗೆ ರೂ.೫೦ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದು ಎಂದು ವಿನೋದ್ ಶಿವಪ್ಪ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗೆ ಪ್ರಸನ್ನ(೯೯೭೨೮೪೭೬೫೬), ಆಲಿಕುಟ್ಟಿ(೯೪೪೮೯೨೨೪೧೪) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಬ್ಲೂಬಾಯ್ಸ್ ಅಧ್ಯಕ್ಷ ಆಲಿಕುಟ್ಟಿ, ಮಾಜಿ ಅಧ್ಯಕ್ಷ ಆದಿಶೇಷ, ಜಾನ್, ಪ್ರಸನ್ನ, ಎಂ.ಎ.ಉಸ್ಮಾನ್ ಇದ್ದರು.