ಮಡಿಕೇರಿ, ಮೇ. ೧೬: ಪಾಲಿಬೆಟ್ಟ ಹಾಗೂ ಹೊಸೂರಿನಲ್ಲಿ ನಡೆದ ಪ್ರತ್ಯೇಕ ಕಾಡಾನೆ ದಾಳಿ ಘಟನೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಇಬ್ಬರ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದರ ಜೊತೆಗೆ ಪುಂಡಾನೆಗಳನ್ನು ಸೆರೆಹಿಡಿಯಲು ತಕ್ಷಣ ಕ್ರಮ ವಹಿಸುವಂತೆ ಅರಣ್ಯ ಇಲಾಖೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ತೀವ್ರ ನಿಗಾ ಘಟಕದಲ್ಲಿ ಇಬ್ಬರ ಆರೋಗ್ಯ ವಿಚಾರಿಸುವಂತೆ ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಅವರಿಗೆ ಶಾಸಕ ಪೊನ್ನಣ್ಣ ಅವರು ತಿಳಿಸಿದ ಮೇರೆಗೆ ಆಸ್ಪತ್ರೆಗೆ ಪೂವಯ್ಯ ಭೇಟಿ ನೀಡಿದರು.
ಇದೇ ಸಂದರ್ಭ ದೂರವಾಣಿ ಮೂಲಕ ಪೊನ್ನಣ್ಣ ಅವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಗಾಯಾಳುಗಳು ಗುಣಮುಖರಾಗುವ ತನಕ ಅವರ ಬಗ್ಗೆ ಮುತುವರ್ಜಿ ವಹಿಸಬೇಕು. ಅದರೊಂದಿಗೆ ಕಾಡಾನೆಗಳ ಉಪಟಳವಿರುವ ಪ್ರದೇಶಗಳಲ್ಲಿ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಕಾಡಿಗಟ್ಟುವ ಕೆಲಸವಾಗಬೇಕು. ರಾಜ್ಯ ಸರಕಾರದಿಂದ ಇದಕ್ಕೆ ಬೇಕಾದ ಅನುಮತಿಯನ್ನು ತ್ವರಿತವಾಗಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಸಂಕೇತ್ ಪೂವಯ್ಯ ಈ ಬಗ್ಗೆ ಪ್ರತಿಕ್ರಿಯಿಸಿ, ನೂತನ ಶಾಸಕರು ಸರಕಾರ ರಚನೆಯ ಪ್ರಕ್ರಿಯೆ ಹಿನ್ನೆಲೆ ಬೆಂಗಳೂರಿನಲ್ಲಿದ್ದಾರೆ. ಗಾಯಾಳುಗಳನ್ನು ಭೇಟಿ ಮಾಡುವಂತೆ ತನಗೆ ತಿಳಿಸಿದ ಮೇರೆಗೆ ಬಂದಿದ್ದೇನೆ. ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮೈಸೂರಿನ ಆಸ್ಪತ್ರೆಯಲ್ಲಿದ್ದು, ಅವರಿಂದ ಮಾಹಿತಿ ಪಡೆದು ಶಾಸಕರಿಗೆ ನೀಡಿದ್ದೇನೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಸಾಲಿಗೆ ಸೇರಿರುವ ವನ್ಯಜೀವಿ-ಮಾನವ ಸಂಘರ್ಷವನ್ನು ಶಾಶ್ವತವಾಗಿ ತಡೆಯುವ ನಿಟ್ಟಿನಲ್ಲಿ ಶೀಘ್ರದಲ್ಲಿ ಶಾಸಕರು ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.