ಸೋಮವಾರಪೇಟೆ, ಮೇ ೧೬ : ಬರೋಬ್ಬರಿ ೧೫ ವರ್ಷಗಳ ನಂತರ ಸೋಮವಾರಪೇಟೆಯಲ್ಲಿರುವ ಶಾಸಕರ ಕಚೇರಿಯು ನೂತನ ಶಾಸಕರನ್ನು ಎದುರು ನೋಡುತ್ತಿದೆ.

ಕಳೆದ ಮೂರು ಅವಧಿಯಲ್ಲಿ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಈ ಬಾರಿ ಚುನಾವಣೆಯಲ್ಲಿ ಪರಾಭವ ಗೊಂಡಿದ್ದು, ನೂತನ ಶಾಸಕರಾಗಿರುವ ಡಾ. ಮಂಥರ್ ಗೌಡ ಅವರ ಆಗಮನಕ್ಕಾಗಿ ಶಾಸಕರ ಕಚೇರಿ ಎದುರು ನೋಡುತ್ತಿದೆ.

೨೦೦೮, ೨೦೧೩ ಹಾಗೂ ೨೦೧೮ರಲ್ಲಿ ಸತತವಾಗಿ ಗೆಲುವು ದಾಖಲಿಸಿ ಕೊಂಡು ಬಂದ ಅಪ್ಪಚ್ಚು ರಂಜನ್ ಅವರು ಇದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಬಾರಿ ಕಚೇರಿಯನ್ನು ಒಂದಿಷ್ಟು ಸುಸಜ್ಜಿತಗೊಳಿಸಲಾಗಿತ್ತು.

ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಕಚೇರಿಗೆ ಬೀಗ ಜಡಿಯಲಾಗಿತ್ತು. ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ತಾಲೂಕು ಬಿಜೆಪಿ ಕಚೇರಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದಲೇ ಕಾರ್ಯಕರ್ತರ ಭೇಟಿ, ಚುನಾವಣಾ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿತ್ತು.

ಇದೀಗ ನೂತನ ಶಾಸಕರಾಗಿ ಡಾ. ಮಂಥರ್ ಗೌಡ ಅವರು ಆಯ್ಕೆಯಾಗಿರುವುದರಿಂದ ಶಾಸಕರ ಕಚೇರಿಯು, ೧೫ ವರ್ಷಗಳ ತರುವಾಯ ಹೊಸ ಮುಖವನ್ನು ನೋಡುತ್ತಿದೆ. ಈಗಾಗಲೇ ಕಚೇರಿಯ ದುರಸ್ತಿ ಕಾರ್ಯಗಳು ನಡೆಯುತ್ತಿದ್ದು, ನಾಮಫಲಕ ಅಳವಡಿಕೆ ಕಾರ್ಯವೂ ಆಗಬೇಕಿದೆ.

ನೂತನ ಕಚೇರಿಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ರೂಪುಗೊಳಿಸಲಾಗುವುದು. ಮುಖ್ಯಮಂತ್ರಿಗಳ ಆಯ್ಕೆಯಾಗಿ ಪ್ರಮಾಣ ವಚನ ಕಾರ್ಯಕ್ರಮ ಪೂರ್ಣಗೊಂಡ ನಂತರ ಕಚೇರಿಯಲ್ಲಿ ಕೆಲಸ ಕಾರ್ಯಗಳು ಆರಂಭಗೊಳ್ಳಲಿವೆ ಎಂದು ನೂತನ ಶಾಸಕ ಡಾ. ಮಂಥರ್ ಗೌಡ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.

- ವಿಜಯ್