ಸೋಮವಾರಪೇಟೆ, ಮೇ ೧೬ : ಇಲ್ಲಿನ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಹುದುಗೂರು ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ವಲಯದ ಸಸ್ಯ ಕ್ಷೇತ್ರದಲ್ಲಿ ವಿವಿಧ ಜಾತಿಯ ಸಸಿಗಳು ಲಭ್ಯವಿದ್ದು, ರೈತರು ಪಡೆದುಕೊಳ್ಳಬಹುದೆಂದು ವಲಯ ಅರಣ್ಯಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಸಸ್ಯಕ್ಷೇತ್ರದಲ್ಲಿ ೫೦ ವಿವಿಧ ಸಸಿಗಳನ್ನು ಬೆಳೆಸಲಾಗಿದ್ದು, ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ ಬಿಪಿಎಲ್ ಕಾರ್ಡುದಾರರು ಸದರಿ ಯೋಜನೆಯಲ್ಲಿ ಉಚಿತವಾಗಿ ಸಸಿಗಳನ್ನು ಪಡೆಯಬಹುದಾಗಿದೆ ಹಾಗೂ ಇತರ ಯೋಜನೆಗಳಲ್ಲಿ ಸರಕಾರ ನಿಗದಿ ಪಡಿಸಿರುವ ೬/೯ ಅಳತೆಯ ಚೀಲದ ಸಸಿ ಒಂದಕ್ಕೆ ೭ ರೂ. ಹಾಗೂ ೮/೧೨ ಅಳತೆಯ ಚೀಲದ ಸಸಿ ಒಂದಕ್ಕೆ ೨೩.೬೦ ಗಳನ್ನು ಪಾವತಿಸಬೇಕು.

ಕೊಡಗಿನಲ್ಲಿ ನಶಿಸುತ್ತಿರುವ ಕಾಡು ಜಾತಿಯ ಹಣ್ಣುಗಳ ಸಸಿಗಳು ಹಾಗೂ ಪ್ರಥಮ ಬಾರಿಗೆ ಜಾನುವಾರಿಗೆ ಉತ್ತಮ ಮೇವಿನ ಬೆಳೆಯಾದ ಅಗಸ ಸಸಿಗಳನ್ನು ಮತ್ತು ಮಣ್ಣಿನ ಸವಕಳಿ ತಡೆಯಲು ನೆಡಬಹುದಾದ ಲಾವಂಚ ಸಸಿಗಳು ಹಾಗೂ ಔಷಧೀಯ ಸಸಿಗಳನ್ನು ಬೆಳೆಯಲಾಗಿದೆ. ವಿಶೇಷ ಹಾಗೂ ಅಪರೂಪವಾದ ಪಾರಿಜಾತ ಸಸಿಗಳು ಸಹ ಲಭ್ಯವಿದೆ ಎಂದು ತಿಳಿಸಿದ್ದಾರೆ.

ಸಸಿಗಳನ್ನು ಪಡೆಯಲು ಪಹಣಿ ಪತ್ರ,ಬಿ.ಪಿ.ಎಲ್. ಕಾರ್ಡ್ (ಮನರೇಗಾ ಯೋಜನೆಗೆ ಮಾತ್ರ) ಉದ್ಯೋಗ ಚೀಟಿ (ಮನರೇಗಾ ಯೋಜನೆಗೆ ಮಾತ್ರ) ಮತ್ತು ಆಧಾರ್ ಕಾರ್ಡ್ ಒದಗಿಸಬೇಕಿದೆ.