ಕುಶಾಲನಗರ, ಮೇ ೧೬: ಸಮಾಜದ ಕಟ್ಟ ಕಡೆಯ ಜನರಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಕೊಡಗು ವಿಶ್ವವಿದ್ಯಾಲಯದ ಗುರಿಯಾಗಿದೆ ಎಂದು ಕುಲಪತಿ ಅಶೋಕ್ ಸಂ.ಆಲೂರ ತಿಳಿಸಿದ್ದಾರೆ.

ಅವರು ‘ಶಕ್ತಿ’ಯೊಂದಿಗೆ ಮಾತನಾಡಿ ಕೊಡಗು ವಿಶ್ವವಿದ್ಯಾಲಯ ೨೩ ಕಾಲೇಜುಗಳನ್ನು ಒಳಗೊಂಡಿದ್ದು ವಿಶ್ವವಿದ್ಯಾಲಯದಲ್ಲಿ ಈಗಾಗಲೇ ೧೫ ವಿಭಾಗಗಳಲ್ಲಿ ಸುಮಾರು ೪೫೦ ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮಡಿಕೇರಿಯಲ್ಲಿ ಪ್ರಾದೇಶಿಕ ಶಿಕ್ಷಣ ಕೇಂದ್ರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವಿದ್ಯಾಲಯ ಕಳೆದ ೭೪ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ೨೨ ಅಧ್ಯಯನ ಪೀಠಗಳನ್ನು ಈ ಕೇಂದ್ರ ಒಳಗೊಂಡಿದೆ. ಅವುಗಳಲ್ಲಿ ೬ ಕೇಂದ್ರಗಳನ್ನು ಕೊಡಗು ವಿಶ್ವವಿದ್ಯಾಲಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿಸಿದರು.

ಮೂರು ತಿಂಗಳಿಗೊಮ್ಮೆ ಕೇಂದ್ರದ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ತಾನು ನೇರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸಲು ಕಾರ್ಯಕ್ರಮ ರೂಪಿಸಿರುವುದಾಗಿ ಮಾಹಿತಿ ನೀಡಿದರು..

ಕೇಂದ್ರದಲ್ಲಿ ಅಗತ್ಯ ಬೇಡಿಕೆ ಇರುವ ಸೈಬರ್ ಸೆಕ್ಯೂರಿಟಿ, ಪ್ರವಾಸೋದ್ಯಮ, ಫುಡ್ ಟೆಕ್ನಾಲಜಿ, ಹೋಟೆಲ್ ಮ್ಯಾನೇಜ್‌ಮೆಂಟ್ ಮುಂತಾದ ಕೋರ್ಸ್ಗಳನ್ನು ಆರಂಭಿಸುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದರು. ಅರ್ಹತೆಗೆ ತಕ್ಕಂತೆ ಸ್ಥಳೀಯರಿಗೆ ಕೇಂದ್ರದಲ್ಲಿ ಉದ್ಯೋಗಾವಕಾಶ ಕೂಡ ಕಲ್ಪಿಸಲಾಗುವುದು ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕಾರ್ಯಕ್ಷಮತೆ, ಅರ್ಹತಾ ಮಾನದಂಡಕ್ಕೆ ಕೇಂದ್ರದಲ್ಲಿ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ತಿಳಿಸಿದ ಕುಲಪತಿಯವರು ಕೊಡಗು ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿಸುವುದು ತಮ್ಮ ಗುರಿ ಎಂದಿದ್ದಾರೆ.

ನೂತನ ವಿಶ್ವವಿದ್ಯಾಲಯದಲ್ಲಿ ಮೂಲಭೂತ ವ್ಯವಸ್ಥೆಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದ ಅವರು ನೂತನ ವಿಶ್ವವಿದ್ಯಾಲಯ ಆರಂಭದಲ್ಲಿ ಕೆಲವು ನ್ಯೂನತೆಗಳು ಸಾಮಾನ್ಯ ಎಂದಿದ್ದಾರೆ. ಅವುಗಳನ್ನು ಸರಿಪಡಿಸಿಕೊಂಡು ಸರಕಾರದ ಅನುದಾನವನ್ನು ಕಾಯದೆ ಕೇಂದ್ರದಲ್ಲಿ ಹಣಕಾಸಿನ ಸ್ವಾಯತ್ತತೆ ನಿರ್ಮಾಣ ಸಂಬAಧ ಸಂಘ ಸಂಸ್ಥೆಗಳ ಸಹಕಾರವನ್ನು ಕೂಡ ಪಡೆಯಲಾಗುವುದು ಈ ಮೂಲಕ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಕುಲಪತಿ ಅಶೋಕ ಸಂ. ಆಲೂರ ತಿಳಿಸಿದ್ದಾರೆ.

-ಚಂದ್ರಮೋಹನ್