ಛಲಗಾತಿ ಹೆಣ್ಣು ಅಸಾಧ್ಯವಾದುದನ್ನು ಸಾಧಿಸಿ ತೋರಿಸಬಲ್ಲಳು. ಸಕಾರಾತ್ಮಕ ಭಾವನೆ ಯಶಸ್ಸಿನತ್ತ ಕೊಂಡೊಯ್ಯುವುದು. ಛಲ ಹಾಗೂ ಧೈರ್ಯವಿದ್ದರೆ ಸಾಧಿಸಬಹುದೆಂದು ತೋರಿಸಿ ಕೊಟ್ಟಿರುವ ಮಹಿಳಾ ಸಾಧಕಿ ಕೊಣಿಯಂಡ ಕಾವ್ಯ ಸಂಜು. ಕುಟ್ಟ ಚೂರಿಕಾಡಿನ ನಿವಾಸಿ ನೆಲ್ಲಿರ ದೇವಯ್ಯ ಸುಜು (ಚಟ್ಟಮಡ) ದಂಪತಿಯ ಮಗಳಾಗಿ ಕಾವ್ಯ ಅವರು ೧೯೮೩ ಏಪ್ರಿಲ್ ೨೮ ರಂದು ಜನಿಸಿದರು. ಕುಟ್ಟದ ಸೇಂಟ್ ಮೇರಿಸ್ ಶಾಲೆಯಲ್ಲಿ ೭ನೇ ತರಗತಿಯವರೆಗೆ ಓದಿ ಆನಂತರ ಹತ್ತರವರೆಗೆ ಮಡಿಕೇರಿಯ ಸೆಂಟ್ ಜೋಸೆಫ್ ಶಾಲೆಯಲ್ಲಿ ಓದಿದರು. ವಿದ್ಯಾರ್ಥಿಯಾಗಿದ್ದಾಗ ಕೊಕ್ಕೋ ಆಟದಲ್ಲಿ ಮತ್ತು ಓಡುವುದರಲ್ಲಿ ಭಾಗಿಯಾಗುತ್ತಿದ್ದರು. ಚಾಮರಾಜನಗರದಲ್ಲಿ ನಡೆದ ರಾಜ್ಯಮಟ್ಟದ ಕೊಕ್ಕೊ ಆಟದಲ್ಲಿ ಇವರ ತಂಡವು ಎರಡನೇ ಸ್ಥಾನ ಪಡೆದಿತ್ತು. ಇವರಿಗೆ ಒಳ್ಳೆಯ ಆಟಗಾರ್ತಿ ಎಂಬ ಪ್ರಶಸ್ತಿಯು ದೊರೆಯಿತು. ಪ್ರೌಢಶಾಲೆಯಲ್ಲಿ ಭರತನಾಟ್ಯ ತರಗತಿಗೆ ಹಾಜರಾಗಿ ನೃತ್ಯ ಕಲಿತು ಶಾಲಾ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದರು. ಕಾಲೇಜಿನಲ್ಲಿ ವಾಲಿಬಾಲ್ ಆಟದಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಹಾಕಿ ಕೂಡ ಆಡುತ್ತಿದ್ದು, ಆಟ, ಓಟ, ನೃತ್ಯದೊಂದಿಗೆ ಓದುವುದರಲ್ಲೂ ಕಾವ್ಯ ಚುರುಕಾಗಿದ್ದರು.

ಕೊಡಗಿನ ಬಾಳಾಜಿ ಗ್ರಾಮದ ಕೊಣಿಯಂಡ ಸಂಜು ಎಂಬವರೊAದಿಗೆ ಕಾವ್ಯ ಅವರ ವಿವಾಹವಾಯಿತು. ವಿವಾಹದ ನಂತರ ಪತಿ ಮತ್ತು ಮಾವನವರಾದ ಶಂಕರಿ ಸುಬ್ಬಯ್ಯ ಹಾಗೂ ಅತ್ತೆ ಸರಸು ಇವರ ಪ್ರೋತ್ಸಾಹದಲ್ಲಿ ಮೈಸೂರಿನ ಹಾಸ್ಟೆಲಿನಲ್ಲಿ ಇದ್ದುಕೊಂಡು ತಮ್ಮ ಓದು ಮುಂದುವರಿಸಿದರು. ಪರೀಕ್ಷೆಯ ಫಲಿತಾಂಶದಲ್ಲಿ ಕಾವ್ಯಳಿಗೆ ೨೦೦೪-೨೦೦೫ ರ ಸಾಲಿನ ಡಾಕ್ಟರ್ ಅಂಬೇಡ್ಕರ್ ಚಿನ್ನದ ಪದಕ ಬಂದಿತ್ತು. ಮೈಸೂರು ವಿಶ್ವವಿದ್ಯಾನಿಲಯ ಅದೇ ಮೊದಲ ಬಾರಿ ಕಾವ್ಯ ಎಂಬ ವಿದ್ಯಾರ್ಥಿಯ ಮೂಲಕ ಈ ಪದಕ ಪಡೆದುಕೊಂಡಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಕ್ರಫರ್ಡ್ ಸಭಾಂಗಣದಲ್ಲಿ ಆಗಿನ ರಾಜ್ಯಪಾಲ ಚತುರ್ವೇದಿ ಅವರು ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಲಾಹೋಟೆಯವರು ಕಾವ್ಯರಿಗೆ ಪದಕ ಪ್ರದಾನ ಮಾಡಿದರು.

ಕೊಡಗಿನಲ್ಲಿ ನೆಲೆಸಿದ ಕಾವ್ಯ ಆನಂತರದಲ್ಲಿ ಅರವತ್ತೊಕ್ಲುವಿನಲ್ಲಿರುವ ಸರ್ವದೈವತಾ ಶಾಲೆಯಲ್ಲಿ ಶಿಕ್ಷಕಿ ಆಗಿ ಎರಡು ವರ್ಷ ವೃತ್ತಿ ಜೀವನ ನಡೆಸಿದರು. ಗೋಣಿಕೊಪ್ಪ ಜೆಸಿಐ ನಲ್ಲಿ ಸದಸ್ಯಳಾಗಿ ಸೇರಿಕೊಂಡು ಎರಡು ವರ್ಷ ಕಾರ್ಯ ನಿರ್ವಹಿಸಿದರು. ನಂತರ ಪೊನ್ನಂಪೇಟೆಯ ಜೆಸಿಐ ಗೋಲ್ಡ್ ನಲ್ಲಿ ಸದಸ್ಯರಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡರು. ಬಳಿಕ ಗೋಣಿಕೊಪ್ಪದ ಒನ್'ನೆಸ್ ಯೂನಿವರ್ಸಿಟಿಯ ಕಾರ್ಯದರ್ಶಿಯಾದರು. ಮುಂದೆ ಪೊನ್ನಂಪೇಟೆ ಜೆಸಿಐ ನ ಮಹಿಳಾ ಅಧ್ಯಕ್ಷರಾಗಿ ಮೂರು ವರ್ಷ ಕಾರ್ಯನಿರ್ವಹಿಸಿದರು. ಆ ಸಮಯದಲ್ಲಿ ಇವರು ಹಲವಾರು ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದರು. ಇವರ ಈ ಸೇವೆಗೆ ಬೆಸ್ಟ್ ಸರ್ವಿಸ್ ಆಫ್ ದ ಇಯರ್ ಪ್ರಶಸ್ತಿ ಬಂದಿತ್ತು. ಬೇಗೂರು ಕೊಲ್ಲಿಯಲ್ಲಿ ಆಟೋ ಕ್ರಾಸ್ ರ‍್ಯಾಲಿಯನ್ನು ಆಯೋಜಿಸಿದ್ದರು.

೨೦೧೮ರಲ್ಲಿ ಜೆಸಿಐ ಇಂಡಿಯಾದ ಪ್ರಯಾಸ್ ಅಂಬಾಸಿಡರ್ ಆಗಿ ಕರ್ನಾಟಕವನ್ನು ಪ್ರತಿನಿಧಿಸಲು ಮುಂಬೈಗೆ ತೆರಳಿದರು. ೨೦೧೯ರಲ್ಲಿ ದಾವಣಗೆರೆಯಲ್ಲಿ ನಡೆದ ಜೆಸಿಐ ಪ್ರೆಸಿಡೆನ್ಸಿಯಲ್ ಅಕಾಡೆಮಿಯ ಕಾರ್ಯಕ್ರಮದಲ್ಲಿ ಕಾವ್ಯಳಿಗೆ ಬೆಸ್ಟ್ ಪ್ರೆಸಿಡೆಂಟ್ ಪ್ರಶಸ್ತಿ ದೊರೆಯಿತು. ಮೂಡಿಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಝೆಡ್'ಜಿಬಿ ಯ ಝೋನ್ ಅಧ್ಯಕ್ಷರಾದ ಜೆಫಿನ್ ಜೋಯ್ ಅವರು ಇವರಿಗೆ ಸೂಪರ್ ಸ್ಟಾರ್ ಆಫೀಸರ್ ಪ್ರಶಸ್ತಿಯನ್ನು ನೀಡಿದರು. ೨೦೨೦ರಲ್ಲಿ ಜೆಸಿಐ ಇಂಡಿಯಾದ ಎಡಿಟೋರಿಯಲ್ ಬೋರ್ಡಿನ ಸದಸ್ಯರಾಗಿದ್ದರು. ಸಮಾಜ ಸೇವೆಯ ಆಸಕ್ತಿ ಇದ್ದ ಇವರು ೨೦೨೦ರಲ್ಲಿ ೨೦ ಮಹಿಳೆಯರನ್ನು ಒಳಗೊಂಡಿರುವ ಸ್ವಯಂ ಪ್ರೇರಣ ಬಳಗವನ್ನು ಕಟ್ಟಿಕೊಂಡು ಸಮಾಜಸೇವೆಗೆ ಕೈ ಹಾಕಿದರು. ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದಿಂದ ಮುಂದುವರೆದ ಈ ಬಳಗವು ಪ್ರವಾಹ ಪೀಡಿತರಿಗೆ, ಕೊರೊನಾದ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡತೊಡಗಿತು. ಅನಾಥ ಮಕ್ಕಳಿಗೆ ಪ್ರೀತಿಯನ್ನು ನೀಡುತ್ತಾ, ಜೀವನಾವಶ್ಯ ಸಾಮಗ್ರಿಗಳನ್ನು ಊಟದ ಸಾಮಗ್ರಿಗಳನ್ನು ನೀಡುತ್ತಾ, ಅವರಲ್ಲಿ ಜೀವನೋತ್ಸಾಹವನ್ನು ತುಂಬ ತೊಡಗಿದರು. ಇವರ ಈ ಸಮಾಜ ಸೇವೆಯನ್ನು ಗುರುತಿಸಿದ ಟಿ.ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘವು ಇವರಿಗೆ ಮದರ್ ತೆರೇಸಾ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೨೦೨೧ ರಲ್ಲಿ ಪಿಅಂಡ್'ಜಿ ಕ್ರಿಯೇಶನ್ ಸಂಸ್ಥೆಯವರು ವೀರಾಜಪೇಟೆಯಲ್ಲಿ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ಸೆಸ್ ಸೌತ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದರು. ನಂತರ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸೆಸ್ ಸೌತ್ ಇಂಡಿಯ ಆಗಿ ಆಯ್ಕೆಯಾದರು ಜೊತೆಗೆ ಬೆಸ್ಟ್ ಆಟಿಟ್ಯೂಡ್ ಬಿರುದನ್ನು ತಮ್ಮದಾಗಿಸಿಕೊಂಡರು. ಮುಂದೆ ಜೈಪುರ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ೭೦ ಸ್ಪರ್ಧಾರ್ಥಿಗಳಲ್ಲಿ ಕಾವ್ಯ ಅವರು ಮಿಸ್ಸೆಸ್ ಇಂಡಿಯಾ ವರ್ಲ್ಡ್ ಕರ್ವಿ ೨೦೨೧ ಆಗಿ ಆಯ್ಕೆಯಾದರು ಜೊತೆಗೆ ಬೆಸ್ಟ್ ಪರ್ಸನಾಲಿಟಿ ಬಿರುದು ಪಡೆದರು. ಮುಂದೆ ಮಿಸ್ಸೆಸ್ ವರ್ಲ್ಡ್ ಸ್ಪರ್ಧೆಗೆ ಭಾಗವಹಿಸಲು ಹೋಗುತ್ತಿರುವ ಕಾವ್ಯ ಅವರು ದೇಶಕ್ಕೆ ಮತ್ತು ನಮ್ಮ ನಾಡಿಗೆ ಹೆಸರು ತರಲೆಂದು ಆಶಿಸೋಣ. ಇತ್ತೀಚೆಗೆ ತೆರೆಕಂಡ ಕಲ್ಲಕೆರೆ ಮಾದೇವಿ ಕೊಡವ ಪೌರಾಣಿಕ ಸಿನಿಮಾದ ಸಹ ನಿರ್ಮಾಪಕಿಯಾಗಿದ್ದು, ಒಂದು ಪಾತ್ರದಲ್ಲಿ ಅಭಿನಯಿಸಿ ಸಿನಿಮಾ ರಂಗಕ್ಕೆ ಕಾಲಿಟ್ಟಿರುವರು. ಪ್ರಸ್ತುತ ತಮ್ಮ ಮಕ್ಕಳಾದ ಧ್ಯಾನ್ ಪೆಮ್ಮಯ್ಯ ಮತ್ತು ಅಮನ್ ಚಿಣ್ಣಪ್ಪ ಅವರ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುತ್ತಾ ‘ಬಾಂಧವ್ಯ’ ಎಂಬ ವಿಷಯದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿರುವರು ಹಾಗೂ ಇದಕ್ಕೆ ಸಂಬAಧಿಸಿದAತೆ ತರಬೇತಿಯನ್ನೂ ನೀಡುತ್ತಿರುವರು. ಕಾವ್ಯ ಅವರ ನೇತೃತ್ವದಲ್ಲಿ ಸ್ವಯಂ ಪ್ರೇರಣಾ ಬಳಗದ ವತಿಯಿಂದ ಮುಂದೆ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಸೋಣ.

- ಉಳುವಂಗಡ ಕಾವೇರಿ ಉದಯ, ಟಿ. ಶೆಟ್ಟಿಗೇರಿ, ಮೊ:೯೫೯೧೩೬೬೨೯೬