“ಉಸಿರು, ಹೆಸರು, ಬದುಕು ಕೊಟ್ಟವಳು ನನ್ನಮ್ಮ. ನೋವಿನಲ್ಲಿ ನಗು ಹಂಚಿ, ಅಂತರAಗದಲ್ಲಿ ಕಲ್ಮಶವಿಲ್ಲದೇ ಕನಸಿನಲ್ಲೂ ನನ್ನನ್ನು ಕಾಯುತ್ತಿರುವವಳು ನನ್ನಮ್ಮ. ನನ್ನ ಜೀವನದ ಸೂಪರ್ ಸ್ಟಾರ್’’ ಎಂದು ಡಿ.ಎಲ್. ಸುಸ್ಮಿತಾ ಹೆಮ್ಮೆಯಿಂದ ಹೇಳುತ್ತಾ ಭಾವುಕರಾಗುತ್ತಾರೆ.

ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ಯುವತಿ ಸುಸ್ಮಿತಾ ಕೂಲಿ ಕಾರ್ಮಿಕರಾದ ತಾಯಿಯ ನೆರಳಿನಲ್ಲಿ ಬೆಳೆದು ಬಂದು ಎಂ.ಕಾA., ಸ್ನಾತಕೋತ್ತರ ಪದವೀಧರೆಯಾದರು. ಓದು ಮುಗಿದ ಬಳಿಕ ಹರಿಹಳ್ಳಿ ಗ್ರಾಮದ ವೈಟಲ್ ಪ್ಲಾಂಟ್ ಪ್ರೋಡಕ್ಟ್÷್ಸ ಕಂಪೆನಿಯಲ್ಲಿ ಲೆಕ್ಕಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಾ ಸ್ವಾವಲಂಭಿ ಯಾಗಿದ್ದರು. ಪ್ರಸ್ತುತ ಬೆಂಗಳೂರಿನ ಮಾರ್ತಳ್ಳಿಯ ಮಹಾದೇವಪುರದ ಬಜಾಜ್ ಶೋರೂಂನಲ್ಲಿ ಲೆಕ್ಕಾಧಿಕಾರಿಯಾಗಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಸೋಮಕ್ಕ-ಲಕ್ಷ್ಮಣ ಬಡ ಕೂಲಿ ಕಾರ್ಮಿಕ ದಂಪತಿ ಏಕೈಕ ಪುತ್ರಿ ಸುಸ್ಮಿತಾ. ವಿವಾಹವಾಗಿ ೧೦ ವರ್ಷಗಳಾದರೂ ತಾಯಿಗೆ ಮಕ್ಕಳಾಗದೇ ಇದ್ದಾಗ ದೇವರ ಹರಕೆ, ವೈದ್ಯರ ಚಿಕಿತ್ಸೆಯಿಂದ ಜನಿಸಿದವರು ಸುಸ್ಮಿತಾ, ಬಡತನದ ಬೇಗೆ ತಟ್ಟದಂತೆ ಮಗಳನ್ನು ಬೆಳೆಸುತ್ತಿರುವಾಗಲೇ ೧೧ನೇ ವಯಸ್ಸಿನಲ್ಲಿ ತಂದೆ ದೈವಾಧೀನರಾದರು. ಒಬ್ಬಂಟಿ ತಾಯಿ ಮಗಳಿಗಾಗಿ ದುಃಖ ನುಂಗಿ, ಬಂಧು ಬಳಗದ ಆಸರೆಯಿಲ್ಲದೇ ಮಗಳೇ ಸರ್ವಸ್ವ ಎಂದು ಭಾವಿಸಿ ಕೂಲಿ ಕೆಲಸ ಮುಂದುವರೆಸಿದರು. ಮಗಳ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಮಗಳ ಜೀವಕ್ಕೆ ಜೀವವಾಗಿ, ಸ್ಫೂರ್ತಿಯ ಸೆಲೆಯಾಗಿ, ಗೆಳತಿಯಂತೆ ಬೆಳೆಸಿದರು.

ಹೆಣ್ಣಿಗೆ ತಾಯಿಯ ಪ್ರೀತಿಗಿಂತ ಭದ್ರತೆಯಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿ ಅವರಿವರ ಮನೆಗೆಲಸ ಮಾಡಿ, ಹೊಲಗದ್ದೆ, ತೋಟಗಳಲ್ಲಿ ದುಡಿದು, ತನ್ನ ಹೊಟ್ಟೆಬಟ್ಟೆ ಕಟ್ಟಿ, ನಿಂದನೆಗಳನ್ನು ನುಂಗಿ ಮಗಳನ್ನು ಬೆಳೆಸಿದರು.ತನ್ನೊಂದಿಗೆ ಇದ್ದರೆ ಕಷ್ಟ ತಿಳಿಯುತ್ತದೆ ಎಂದು ಭಾವಿಸಿ ಮಗಳು ಪ್ರೌಢಶಾಲೆಗೆ ೮ನೇ ತರಗತಿಗೆ ಕಾಲಿಡುವಾಗಲೇ ಹಾಸ್ಟೆಲ್ ಸೇರಿಸಿದರು. ಕಾಲೇಜು ಶಿಕ್ಷಣದ ದುಬಾರಿ ವೆಚ್ಚಕ್ಕೂ ಅಳುಕದೇ ತನ್ನಮಗಳು ತನ್ನಂತೆ ಕೂಲಿ ಕಾರ್ಮಿಕಳಾಗದೇ ಸ್ವಾವಲಂಭಿಯಾಗಿ ಸುಖ ಜೀವನ ಸಾಗಿಸಬೇಕು ಎಂಬ ಛಲದಿಂದಲೇ ಸೋಮಕ್ಕ ಕಷ್ಟ ಸಹಿಷ್ಣುವಾಗಿ ದುಡಿದ ಫಲವೇ ಮಗಳು ಸುಸ್ಮಿತಾ ಎಂ.ಕಾA., ಸ್ನಾತಕೋತ್ತರ ಪದವಿಧರೆಯಾಗಲು ಸಾಧ್ಯವಾಯಿತು. ಕೂಲಿ ಕಾರ್ಮಿಕೆಯ ಮಗಳು ಅಧಿಕಾರಿಯಾಗಿ ಭವಿಷ್ಯ ರೂಪಿಸಿಕೊಳ್ಳುವಂತಾಯಿತು.

ಮಗಳು ದುಡಿಯುವಂತಾದರೂ ಬೇಡವೆಂದರೂ ಸೋಮಕ್ಕ ಇಂದೂ ದುಡಿಯುತ್ತಿದ್ದಾರೆ. ಮಗಳು ಅಸಮಾದಾನ ವ್ಯಕ್ತಪಡಿಸಿದರೆ, “ನಿನ್ನನ್ನು ಒಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಟ್ಟು ನೀನು ಸುಖಿ ಸಂಸಾರ ಬಾಳಿದಾಗಲೇ ನನ್ನ ದುಡಿಮೆಗೆ ಮುಕ್ತಾಯ ಹಾಡುವುದು’’ ಎಂದು ದೃಢಸ್ವರದಲ್ಲಿ ನುಡಿಯುತ್ತಿದ್ದರು.

ಇತ್ತೀಚೆಗಷ್ಟೇ ಸುಸ್ಮಿತಾ ಹಾಸನದ ವಿಜಯಕುಮಾರ್ ಅವರನ್ನು ವಿವಾಹವಾಗಿದ್ದು, ತಾಯಿಯ ಕನಸನ್ನು ನನಸಾಗಿಸಿದ್ದಾರೆ. ಪತಿ ವಿಜಯ ಕುಮಾರ್ ಸಹ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮಗಳ ಸುಂದರ ಜೀವನಕ್ಕೆ ತನ್ನ ಬದುಕನ್ನೇ ಮುಡಿಪಾಗಿಟ್ಟ ತಾಯಿಯ ಬಗ್ಗೆ ಸುಸ್ಮಿತಾರಿಗೆ ಅಪಾರ ಪ್ರೀತಿ ಗೌರವ. ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತು ಆತ್ಮವಿಶ್ವಾಸ ಮೂಡಿಸಿ ಬದುಕು ರೂಪಿಸಿದ ಅಮ್ಮನೇ ತನಗೆ ಮಾದರಿ, ಆದರ್ಶ ಎಂದು ಪ್ರೀತಿಯಿಂದ ನುಡಿಯುತ್ತಾರೆ.

- ಶ.ಗ. ನಯನತಾರಾ, ಶನಿವಾರಸಂತೆ.